ಬೆಂಗಳೂರು[ಜು.18] : ವಿಶ್ವಾಸ ಮತ ಯಾಚನೆಗೆ ಸರ್ಕಾರ ಮುಂದಾಗಿದೆ. ಆದರೆ ಅತೃಪ್ತರು ಸೇರಿದಂತೆ ಹಲವು ಕೈ, ಜೆಡಿಎಸ್ ಶಾಸಕರು ಗೈರಾಗಿದ್ದಾರೆ. ಅವರು ಆಗಮಿಸುವುದು ಅನುಮಾನವಾಗಿದ್ದು, ಸರ್ಕಾರ ಉಳಿಯುತ್ತದೆಯೋ, ಉರುಳುತ್ತದೆಯೋ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.  

ಅತೃಪ್ತರು ಗೈರಾದ ಬೆನ್ನಲ್ಲೇ ಸದನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕಾಂಗ್ರೆಸ್ ಶಾಸಕ ಪರಾರಿಯಾಗಲು ಯತ್ನಿಸಿದ್ದಾರೆ. ಬಳ್ಳಾರಿ ಶಾಸಕರೆಲ್ಲರೂ ಕೂಡ ಅಸಮಾಧಾನಿತರಾಗಿಯೇ ಇದ್ದು, ಆನಂದ್ ಸಿಂಗ್ ರಾಜೀನಾಮೆ ನೀಡಿ ತೆರಳಿದ್ದಾರೆ, ಗ್ರಾಮಾಂತರ ಶಾಸಕ ನಾಗೇಂದ್ರ ಆಸ್ಪತ್ರೆ ಸೇರಿದ್ದಾರೆ. ಇತ್ತ ವಿಧಾನಸೌಧಕ್ಕೆ ಆಗಮಿಸಿದ್ದ ಕಂಪ್ಲಿ ಶಾಸಕ ಗಣೇಶ್ ಹೊರ ಹೋಗಲು ಯತ್ನಿಸಿದ್ದಾರೆ. 

ವಿಶ್ವಾಸಮತಕ್ಕೆ ಹಲವರು ಗೈರಾಗಿರುವುದು ಮೈತ್ರಿ ಪಾಳಯಕ್ಕೆ ಆತಂಕ ತಂದ ಬೆನ್ನಲ್ಲೇ ಆಗಮಿಸಿಯೂ ಮತ್ತೆ ವಾಪಸ್ ತೆರಳಲು ಪ್ರಯತ್ನಿಸಿದ ಶಾಸಕ ಗಣೇಶ್ ಅವರನ್ನು ಕೈ ನಾಯಕರು ಹಿಡಿದು ತಂದಿದ್ದಾರೆ. ಹೆಬ್ಬಾಳ ಶಾಸಕ ಭೈರತಿ ಸುರೇಶ್  ಹಾಗೂ ಸಚಿವ ಜಮೀರ್ ಅಹಮದ್ ಅವರನ್ನು ಮರಳಿ ಮತ್ತೆ ಸದನಕ್ಕೆ ಕರೆತಂದಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೊದಲಿಂದಲೂ ಕೂಡ ಅಸಮಾಧಾನಿತರಾಗಿಯೇ ಇದ್ದ ಗಣೇಶ್ ಈ ಹಿಂದೆ ಆನಂದ್ ಸಿಂಗ್ ಅವರೊಂದಿಗಿನ ಗಲಾಟೆಯಲ್ಲಿ ಸುದ್ದಿಯಾಗಿದ್ದರು. ಇಬ್ಬರು ರೆಸಾರ್ಟ್ ನಲ್ಲಿ ಜಗಳವಾಗಿ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಜಾಮೀನು ಮೂಲಕ ಹೊರ ಬಂದು ಪಕ್ಷದಿಂದ ಹೊರ ಹಾಕುವ ಯತ್ನಗಳೂ ನಡೆದಿದ್ದವು.