Asianet Suvarna News Asianet Suvarna News

ಕರ್ನಾಟಕದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್‌ಗೂ ನಡುಕ!

ಮಧ್ಯಪ್ರದೇಶ ಕಾಂಗ್ರೆಸ್‌ಗೂ ನಡುಕ| ಕರ್ನಾಟಕದಲ್ಲಿ ಸರ್ಕಾರ ಪತನ ಭೀತಿ ಬೆನ್ನಲ್ಲೇ ಎಚ್ಚೆತ್ತ ಸಿಎಂ ಕಮಲ್‌ನಾಥ್‌| ವಿ. ಅಧಿವೇಶನ ಮುಗಿವವರೆಗೂ ರಾಜಧಾನಿ ಬಿಡದಂತೆ ಶಾಸಕರಿಗೆ ಸೂಚನೆ

Kamal Nath moves to avoid a Karnataka in Madhya Pradesh
Author
Bangalore, First Published Jul 10, 2019, 8:54 AM IST

ಭೋಪಾಲ್‌[ಜು.10]: ಕರ್ನಾಟಕದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರದ ಪತನ ಭೀತಿ ಎದುರಿಸುತ್ತಿರುವ ಸುದ್ದಿ, ಅಲ್ಪಬಹುಮತದಿಂದ ಸರ್ಕಾರ ನಡೆಸುತ್ತಿರುವ ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಅಂಥ ಯಾವುದೇ ಬೆಳವಣಿಗೆಗೆ ಅವಕಾಶ ನೀಡದೇ ಇರುವ ನಿಟ್ಟಿನಲ್ಲಿ ವಿಧಾನಸಭೆ ಅಧಿವೇಶನ ಮುಗಿಯುವವರೆಗೂ ಶಾಸಕರಿಗೆ ರಾಜಧಾನಿ ಭೋಪಾಲ್‌ ಬಿಟ್ಟು ತೆರಳದಂತೆ ಮುಖ್ಯಮಂತ್ರಿ ಕಮಲ್‌ನಾಥ್‌ ಸೂಚಿಸಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಯ ಮುಂಗಾರು ಅಧಿವೇಶನ ಜುಲೈ8ಕ್ಕೆ ಆರಂಭವಾಗಿದ್ದು, ಶೀಘ್ರವೇ ಹಣಕಾಸು ಮಸೂದೆಗೆ ಅನುಮೋದನೆ ಪಡೆದುಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಒಂದು ವೇಳೆ ಹಣಕಾಸು ಮಸೂದೆಯ ವೇಳೆ ಶಾಸಕರ ಕೊರತೆ ಬಿದ್ದರೆ, ವಿಪಕ್ಷಗಳು ಮಸೂದೆಯನ್ನು ಮತಕ್ಕೆ ಹಾಕಲು ಕೋರುವ ಸಾಧ್ಯತೆ ಇದೆ. ಒಂದು ವೇಳೆ ಹಾಗೇನಾದರೂ ಆಗಿ ಹಣಕಾಸು ಮಸೂದೆಗೆ ಸೋಲಾದರೆ ಸಿಎಂ ರಾಜೀನಾಮೆ ನೀಡುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಹಣಕಾಸು ಮಸೂದೆ ಸೇರಿದಂತೆ ಪ್ರಮುಖ ಮಸೂದೆಗಳು ಅಂಗೀಕಾರವಾಗುವವರೆಗೂ ರಾಜಧಾನಿ ಬಿಟ್ಟು ತೆರಳಬೇಡಿ ಎಂದು ಆಡಳಿತಾರೂಢ ಕಾಂಗ್ರೆಸ್‌ ಮತ್ತು ಸರ್ಕಾರಕ್ಕೆ ಬೆಂಬಲ ನೀಡಿರುವ ಬಿಎಸ್‌ಪಿ, ಕಾಂಗ್ರೆಸ್‌ ಮತ್ತು ಪಕ್ಷೇತರ ಸದಸ್ಯರಿಗೆ ಕಮಲ್‌ನಾಥ್‌ ಸೂಚಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

230 ಸದಸ್ಯ ಬಲದ ಮಧ್ಯಪ್ರದೇಶದಲ್ಲಿ ಬಹುಮತಕ್ಕೆ 116 ಸದಸ್ಯರ ಬೆಂಬಲ ಅಗತ್ಯವಿದೆ. 114 ಸ್ಥಾನ ಗಳಿಸಿರುವ ಕಾಂಗ್ರೆಸ್‌ ಬಿಎಸ್‌ಪಿಯ ಇಬ್ಬರು, ಸಮಾಜವಾದಿ ಪಕ್ಷದ ಒಬ್ಬ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. 109 ಸ್ಥಾನಗಳಿಸಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿದೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 29 ಸ್ಥಾನಗಳ ಪೈಕಿ 28ರಲ್ಲಿ ಬಿಜೆಪಿ ಗೆದ್ದಿತ್ತು. ಹೀಗಾಗಿ ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಹೀಗಾಗಿ ಸರ್ಕಾರದ ವಿಶ್ವಾಸ ಮತ ಸಾಬೀತುಪಡಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಗೋಪಾಲ್‌ ಭಾರ್ಗವ ಅವರು ರಾಜ್ಯಪಾಲರಿಗೆ ಮನವಿ ಮಾಡಿತ್ತು. ಹೀಗಾಗಿ ಕಾಂಗ್ರೆಸ್‌, ಸರ್ಕಾರಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

Follow Us:
Download App:
  • android
  • ios