ಸೂಪರ್​ ಸ್ಟಾರ್​ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಸೂಚನೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಈಗ ತಮಿಳು ನಟ ಕಮಲ್​ ಹಾಸನ್​ ಕೂಡ ರಾಜಕೀಯ ಪ್ರವೇಶ ಮಾಡುವ ಸೂಚನೆ ನೀಡಿದ್ದಾರೆ. ರಜನಿಗೂ ಮುನ್ನ ಪಾಲಿಟಿಕ್ಸ್ 'ಗೆ ಎಂಟ್ರಿ ಕೊಡಲು ಸನ್ನದ್ಧರಾಗಿದ್ದಾರೆ. ಈ ಸುದ್ದಿಯನ್ನು ಮೊದಲು ಕೊಟ್ಟಿದ್ದು ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭ.

ಚೆನ್ನೈ(ಆ.19): ತಮಿಳುನಾಡು ರಾಜಕೀಯವೇ ತುಂಬ ವಿಚಿತ್ರ, ವಿಭಿನ್ನ. ಹಲವು ವರ್ಷಗಳಿಂದ ತಮಿಳು ನಾಡಿನಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಹೀಗಾಗಿಯೇ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪಿಸಲು ನಾಯಕರು ಹಾಗೂ ಸ್ಟಾರ್​ ನಟರು ನಾ-ಮುಂದು-ತಾ ಮುಂದು ಅಂತ ಪಕ್ಷ ಸ್ಥಾಪನೆ ಮಾಡಿ ಯಶಸ್ಸು ಕೂಡ ಆಗಿದ್ದಾರೆ. ಈಗ ಅವರ ದಾರಿಯಲ್ಲಿ ನಟ ಕಮಲ್​ ಹಾಸನ್​​ ಕೂಡ ಸಾಗುತ್ತಿದ್ದಾರೆ. ಈ ಸುದ್ದಿಯನ್ನು ಎಕ್ಸ್ ಕ್ಲೂಸಿವ್ ಆಗಿ ಮೊದಲು ಕೊಟ್ಟಿದ್ದು ಕನ್ನಡಪ್ರಭ ಪತ್ರಿಕೆ.

ಕಮಲ್‌ ಹಾಸನ್ ರಾಜಕೀಯ ಪ್ರವೇಶ

ಸೂಪರ್​ ಸ್ಟಾರ್​​ ರಜನೀಕಾಂತ್​​ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈಗ ರಜಿನಿಕಾಂತ್​ ಮುಂಚೆಯೇ ತಮಿಳು ನಟ ಕಮಲ್‌ಹಾಸನ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದೆ. ಕಮಲ್‌ಹಾಸನ್ ತಮ್ಮದೇ ಆದ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ಮಾಹಿತಿ ಜೋರಾಗಿ ಹರಿದಾಡುತ್ತಿದೆ. ಶೀಘ್ರವೇ ಈ ಕುರಿತು ಕಮಲ್​ ಹಾಸನ್​ ಪ್ರಕಟಣೆ ಹೊರಹಾಕಲಿದ್ದಾರೆ.

ಈವರೆಗೆ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಅಣ್ಣಾ ಡಿಎಂಕೆ ಮಾತ್ರ ರಾಜ್ಯದಲ್ಲಿ ಮುಖ್ಯ ಪ್ರತಿಸ್ಪರ್ಧಿಗಳಾಗಿದ್ದವು. ಈಗ ಕಮಲ್ ಪ್ರವೇಶದೊಂದಿಗೆ ತಮಿಳುನಾಡು ರಾಜಕೀಯ ರಂಗೇರಲಿದ್ದು, ಹೊಸ ತಿರುವು ಪಡೆಯಲಿದೆ. ಇದರ ಜತೆಗೆ ಕಾಂಗ್ರೆಸ್, ಬಿಜೆಪಿ, ಡಿಎಂಡಿಕೆ, ಎಂಡಿಎಂಕೆ, ಪಿಎಂಕೆ ಕೂಡ ಕಣಕ್ಕಿಳಿಯಲಿದ್ದು, ಬಹುಕೋನ ಸ್ಪರ್ಧೆ ಏರ್ಪಡಲಿದೆ.

ಇನ್ನು ನಟ ಕಮಲ್​ ಹಾಸನ ಇತ್ತೀಚಿನ ದಿನಗಳಲ್ಲಿ ರಾಜಕೀಯ ಹೇಳಿಕೆ ಮೂಲಕ ಸಕ್ರಿಯರಾಗಿದ್ದರು. ಹಲವು ಬಾರಿ ರಾಜ್ಯ ಸರ್ಕಾರದ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದರು. ಒಟ್ಟಿನಲ್ಲಿ ನಟ ಕಮಲ್​ ಹಾಸನ್​ ಹೊಸ ಪಕ್ಷ ಸ್ಥಾಪನೆ ಮಾಡುವುದರ ಮೂಲಕ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. 2019ರ ತಮಿಳುನಾಡು ಚುನಾವಣೆಯಲ್ಲಿ ಸ್ಟಾರ್​ಗಳ ರಂಗು ಜೋರಾಗಿ ಇರಲಿದೆ.