ತಮಿಳ್ನಾಡಿಗೆ ಹೊಸ ನಾಯಗನ್‌ : ಕಮಲ್‌ ಪಕ್ಷದ ಹೆಸರು ಮಕ್ಕಳ್‌ ನೀಧಿ ಮಯ್ಯಂ

First Published 22, Feb 2018, 12:30 AM IST
Kamal Haasan launches party Makkal Needhi Maiam says will devote life to people
Highlights

ಸಿನಿಮೀಯ ಶೈಲಿಯಲ್ಲಿ ಬಂದು ಪಕ್ಷದ ಬಾವುಟ ಬಿಡುಗಡೆಗೊಳಿಸಿದ ಸಂದರ್ಭ, ನೆರೆದಿದ್ದ ಭಾರೀ ಸಂಖ್ಯೆಯ ಜನರು ಕರತಾಡನ, ಜೈಕಾರಗಳಿಂದ ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಮೂಲಕ ಗಮನ ಸೆಳೆದರು.

ಮದುರೈ(ಫೆ.22): ನಟ, ನಟಿಯರು ರಾಜಕೀಯ ನಾಯಕರಾಗಿ ಹೊರಹೊಮ್ಮವ ಅತಿದೊಡ್ಡ ಇತಿಹಾಸ ಹೊಂದಿರುವ ತಮಿಳುನಾಡು, ಮತ್ತೊಮ್ಮೆ ಇದೇ ಘಟನೆಗೆ ಸಾಕ್ಷಿಯಾಗಿದೆ. ದೇಶಕಂಡ ಅತ್ಯುತ್ತಮ ನಟರ ಪೈಕಿ ಒಬ್ಬರಾದ ಕಮಲ್‌ಹಾಸನ್‌, ಬುಧವಾರ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ದೇಗುಲಗಳ ನಗರಿ ಮದುರೈನಲ್ಲಿ ಬುಧವಾರ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕಮಲ್‌ ತನ್ನ ನೂತನ ಪಕ್ಷ ಮಕ್ಕಳ್‌ ನೀಧಿ ಮಯ್ಯಂಹೆಸರು ಪ್ರಕಟಿಸಿದರು. ಜೊತೆಗೆ ಐಕ್ಯತೆಯ ಸಂದೇಶ ಸಾರುವ ಚಿಹ್ನೆಯನ್ನೂ ಅನಾವರಣಗೊಳಿಸಿದರು.

ಇದರೊಂದಿಗೆ ಮಾಜಿ ಸಿಎಂ ಜಯಲಲಿತಾ ನಿಧನದ ಬಳಿಕ ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ನಿರ್ವಾತವನ್ನು ತುಂಬುವ ಮತ್ತು ಹೊಸ ಕ್ಷೇತ್ರದಲ್ಲಿ ಬೆಳೆಯುವ ದಿಕ್ಕಿನೆಡೆಗೆ ಕಮಲ್‌ ಮೊದಲ ಹೆಜ್ಜೆ ಇಟ್ಟಂತೆ ಆಗಿದೆ.

ಸಿನಿಮೀಯ ಶೈಲಿಯಲ್ಲಿ ಬಂದು ಪಕ್ಷದ ಬಾವುಟ ಬಿಡುಗಡೆಗೊಳಿಸಿದ ಸಂದರ್ಭ, ನೆರೆದಿದ್ದ ಭಾರೀ ಸಂಖ್ಯೆಯ ಜನರು ಕರತಾಡನ, ಜೈಕಾರಗಳಿಂದ ಒಪ್ಪಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಮೂಲಕ ಗಮನ ಸೆಳೆದರು.

ಕಲಾಂ ಮನೆಗೆ ಭೇಟಿ

ಪಕ್ಷ ಘೋಷಣೆಗೂ ಮುನ್ನಾ ಕಮಲ್‌, ಬೆಳಗ್ಗೆ ರಾಮೇಶ್ವರಂನಲ್ಲಿರುವ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್‌ ಕಲಾಂ ಮನೆಗೆ ಭೇಟಿ ನೀಡುವ ಮೂಲಕ ದಿನದ ಕಾರ್ಯಕ್ರಮ ಆರಂಭಿಸಿದರು. ಕಲಾಂ ತಮ್ಮ ಆದರ್ಶ ಪುರುಷ ಎಂದು ಇದೇ ವೇಳೆ ಕಮಲ್‌ ಬಣ್ಣಿಸಿದರು. ಕಲಾಂ ಕುಟುಂಬ ಕಮಲ್‌ಗೆ ಒಂದು ಸ್ಮರಣಿಕೆ ನೀಡಿದರು. ಬಳಿಕ ಪೆರುಕರುಂಬುನಲ್ಲಿರುವ ಕಲಾಂ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ಕಮಲ್‌ ಶ್ರದ್ಧಾಂಜಲಿ ಅರ್ಪಿಸಿದರು. ಕಲಾಂ ಕಲಿತಿದ್ದ ಶಾಲೆಗೆ ಭೇಟಿ ನೀಡಲು ಕಮಲ್‌ ಉದ್ದೇಶಿಸಿದ್ದರಾದರೂ, ‘ರಾಜಕೀಯವಾಗುತ್ತದೆ ಎಂಬ ಕಾರಣ ನೀಡಿ, ಸ್ಥಳೀಯಾಡಳಿತ ಅದಕ್ಕೆ ಅನುಮತಿ ನೀಡಿರಲಿಲ್ಲ.

ಬಾವುಟದಲ್ಲಿ ಕಪ್ಪು- ಬಳಿ ಬಣ್ಣ

ಬಾವುಟ ಕಪ್ಪು ಹಿನ್ನೆಲೆಯಲ್ಲಿ ಬಿಳಿ ಬಣ್ಣದ್ದಾಗಿದ್ದು, ಆರು ಕೈಗಳು ಪರಸ್ಪರ ಬೆಸೆದುಕೊಂಡಿರುವ ಚಿಹ್ನೆ ಪ್ರಕಟಿಸಲಾಗಿದೆ. ಬಾವುಟಗಳಲ್ಲಿ ಕಪ್ಪು ಮತ್ತು ಬಿಳಿ ತಮಿಳುನಾಡಿನ ಪ್ರಮುಖ ಎರಡು ರಾಜಕೀಯ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗಳಲ್ಲಿ ಪ್ರಮುಖವಾಗಿ ಅಡಕವಾಗಿರುವಂತದ್ದು ಮತ್ತು ತಮಿಳುನಾಡಿನಲ್ಲಿ ಈ ಎರಡೂ ಬಣ್ಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ.

ದಕ್ಷಿಣದ 6 ದ್ರಾವಿಡ ರಾಜ್ಯಗಳ ಒಗ್ಗಟ್ಟಿನ ಸಂಕೇತದ ಚಿಹ್ನೆ!

ಕಮಲ್‌ ಹಾಸನ್‌ರ ಮಕ್ಕಳ್‌ ನೀಧಿ ಮಯ್ಯಂಬಾವುಟದಲ್ಲಿ ಆರು ಕೈಗಳು ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಪರಸ್ಪರ ಬೆಸೆದುಕೊಂಡಿವೆ. ಅದರ ನಡುವೆ ಕಪ್ಪು ಹಿನ್ನೆಲೆಯಲ್ಲಿ ಬಿಳಿ ನಕ್ಷತ್ರವೊಂದಿದೆ. ಈ ಆರು ಕೈಗಳು ಪರಸ್ಪರ ಬೆಸೆದುಕೊಂಡಿರುವುದು ದಕ್ಷಿಣ ಭಾರತದ ಆರು ರಾಜ್ಯಗಳ ಒಗ್ಗಟ್ಟಿನ ಸಂಕೇತ ಎಂದು ಕಮಲ್‌ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ದ್ರಾವಿಡ ಮುಖ್ಯಮಂತ್ರಿಗಳಿದ್ದು, ದ್ರಾವಿಡ ಚಳವಳಿ ಬಲವಾಗಲಿದೆ ಎಂದು ಈ ಹಿಂದೆ ಕಮಲ್‌ ಹೇಳಿದ್ದರು. ಹೀಗಾಗಿ, ದ್ರಾವಿಡ ಚಳುವಳಿಯನ್ನು ದಕ್ಷಿಣ ಭಾರತದಲ್ಲಿ ದೃಢಪಡಿಸುವ ನಿಟ್ಟಿನಲ್ಲಿ ಕಮಲ್‌ ಗುರಿಯಿಟ್ಟಿದ್ದಾರೆ ಎಂದು ಚಿಹ್ನೆಯನ್ನು ವಿಶ್ಲೇಷಿಸಲಾಗಿದೆ.

ಮಕ್ಕಳ್‌ ನೀಧಿ ಮಯ್ಯಂ ಎಂದರೆ..

ಕಮಲ್‌ ಪಕ್ಷದ ಹೆಸರು ಜನರ ನ್ಯಾಯದ ಕೇಂದ್ರ ಎಂಬ ಅರ್ಥವನ್ನು ಹೊಂದಿದೆ.

loader