ಕಲಬುರಗಿ (ಏ. 10): ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌ನಲ್ಲಿ ಕಾಂಗ್ರೆಸ್‌ ಮತ್ತು ಕಲಬುರಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ್‌ ಖರ್ಗೆ ಪರ ಪ್ರಚಾರ ನಡೆಸುತ್ತಿದ್ದ ಆರೋಪದ ಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. 

ಕಲಬುರಗಿ ತಾಲೂಕಿನ ಭೀಮಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿಠ್ಠಲ್‌ ವಗ್ಗನ್‌ ಅಮಾನತಾದ ಶಿಕ್ಷಕ. ತಾವು ಸರ್ಕಾರಿ ನೌಕರ ಎಂಬುದನ್ನು ಮರೆತು ಸೇವಾ ನಿಯಮಗಳನ್ನು ಗಾಳಿಗೆ ತೂರಿ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಾರೆ.

ಬಿಜೆಪಿ ವಿರುದ್ಧ ಮತ್ತು ಕೇಂದ್ರದ ಮಂತ್ರಿಗಳು, ಸಂಸದರ ವಿರುದ್ಧ ವಾಟ್ಸ್‌ಆ್ಯಪ್‌, ಫೇಸ್ಬುಕ್‌ಗಳಲ್ಲಿ ಅವಹೇಳನಕಾರಿ, ಅಸಂವಿಧಾನಿಕ ಪದ ಬಳಸಿ ವ್ಯಂಗ್ಯಚಿತ್ರಗಳ ಸಹಿತ ನಿಂದನೆ ಮಾಡಿದ್ದಾರೆ. ಹೀಗಾಗಿ ಕೆಸಿಎಸ್‌ಆರ್‌, ಸಿಸಿಎ ಮತ್ತು ಪ್ರಜಾಪ್ರತಿನಿಧಿ ಕಾಯಿದೆ 1951ರ ಪ್ರಕಾರ ವಗ್ಗನ್‌ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಡಿಡಿಪಿಐ ಶಾಂತಗೌಡ ಪಾಟೀಲ್‌ ಅಮಾನತು ಆದೇಶ ಹೊರಡಿಸಿದ್ದಾರೆ.