ಬಿಜಾಪುರ [ಜೂ.29] : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದ ನಕ್ಸಲರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆಯ ಜಿಲ್ಲೆಯ ಯೋಧ ಪಿ. ಮಹಾದೇವ (50) ಸೇರಿ ಸಿಆರ್‌ಪಿಎಫ್‌ನ ಮೂವರು ಯೋಧರು ಸಾವನ್ನಪ್ಪಿದ್ದರು. ಜೊತೆಗೆ ಯೋಧರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಬಾಲಕಿಯರು ಸಿಕ್ಕಿಬಿದ್ದಿದ್ದು, ಈ ಪೈಕಿ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಶುಕ್ರವಾರ ಮುಂಜಾನೆ ಸಿಆರ್‌ಪಿಎಫ್‌ನ 199ನೇ ಬೆಟಾಲಿಯನ್‌ಗೆ ಸೇರಿದ ಯೋಧರು ಮತ್ತು ರಾಜ್ಯ ಪೊಲೀಸರ ತಂಡ ಕೇಶುಕುಟುಲ್‌ ಎಂಬ ಗ್ರಾಮದಿಂದ ಬೈರಮ್‌ಗಢದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ತಮ್ಮ ಪಹರೆ ಸ್ಥಳಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ನಕ್ಸಲರ ಗುಂಪೊಂದು ಏಕಾಏಕಿ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಯೋಧರು ಕೂಡಾ ಪ್ರತಿದಾಳಿ ನಡೆಸಿದರು. ಆದರೆ ಏಕಾಏಕಿ ನಡೆದ ದಾಳಿಯ ಪರಿಣಾಮ, ಸಿಆರ್‌ಪಿಎಫ್‌ನ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟೆರ್‌ ಮಹಾದೇವ.ಪಿ, ಉತ್ತರಪ್ರದೇಶ ಮದನ್‌ ಪಾಲ್‌ ಸಿಂಗ್‌ (52) ಮತ್ತು ಕೇರಳದ ಸಾಜು ಒ.ಪಿ (47) ಸ್ಥಳದಲ್ಲೇ ಸಾವನ್ನಪ್ಪಿದರು.

ಇದೇ ವೇಳೆ ಗುಂಡಿನ ಚಕಮಕಿ ನಡೆಯುತ್ತಿರುವ ವೇಳೆ ಗೂಡ್ಸ್‌ ವಾಹನವೊಂದರಲ್ಲಿ ತೆರಳುತ್ತಿದ್ದ ಇಬ್ಬರು ಬಾಲಕಿಯರಿಗೂ ಗುಂಡು ತಗುಲಿದೆ. ಈ ಪೈಕಿ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. ಇನ್ನೋರ್ವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಿಂದ ಭದ್ರತಾ ಪಡೆಗಳಿಗೆ ಸೇರಿದ ಒಂದು ಎಕೆ -47 ಗನ್‌, ಒಂದು ಗುಂಡು ನಿರೋಧಕ ಜಾಕೆಟ್‌, ವೈರ್‌ಲೆಸ್‌ ಸೆಟ್‌, ಮದ್ದುಗುಂಡುಗಳನ್ನು ನಕ್ಸಲರು ಅಪಹರಿಸಿಕೊಂಡು ಹೋಗಿದ್ದಾರೆ.

3 ದಿನದಲ್ಲಿ ಮನೆಗೆ ಬರುವವರಿದ್ದರು

ಕಲಬುರಗಿ: ನಕ್ಸಲ್‌ ಗುಂಡಿಗೆ ಬಲಿಯಾದ ಯೋಧ ಮಹಾದೇವ ಇಂದ್ರಸೇನ್‌ ಪೊಲೀಸ್‌ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದವರು. ಮಹಾದೇವ 3 ದಶಕಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆಯಲ್ಲಿದ್ದರು. ಇನ್ನೆರಡು ಮೂರು ದಿನಗಳಲ್ಲಿ ರಜೆ ಮೇಲೆ ತಮ್ಮ ಸ್ವಗ್ರಾಮ ಮರಗುತ್ತಿಗೆ ಬರುವವರಿದ್ದರು. ಅವರ ಪಾರ್ಥೀವ ಶರೀರ ನಾಳೆ ಹೈದರಾಬಾದ್‌ ಮಾರ್ಗವಾಗಿ ಮರಗುತ್ತಿಗೆ ಆಗಮಿಸಲಿದೆ. ಜಿಲ್ಲಾ ಎಸ್ಪಿ ಯಡಾ ಮಾರ್ಟಿನ್‌ ಅವರ ಮಾಹಿತಿ ಪ್ರಕಾರ ಶನಿವಾರ ಸಂಜೆ 4 ಗಂಟೆ ಹೊತ್ತಿಗೆ ಮರಗುತ್ತಿಯಲ್ಲಿಯೇ ಮೃತ ಯೋಧನ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಯಲಿದೆ.