ಚಾಮರಾಜನಗರ:  ಇನ್ನೇನು ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳುಗಳು ಬಾಕಿ ಇರುವಾಗಲೇ, ಟೆಕೆಟ್ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಬೆನ್ನಲ್ಲೇ ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ಸಹ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಬಿಜೆಪಿಯಿಂದ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ. 

ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಇರಾದೆ ಹೊಂದಿರುವ ಕೆ.ಶಿವರಾಂ ಚಾಮರಾಜನಗರ ಜಿಲ್ಲೆಯಾದ್ಯಾಂತ ಸಂಚರಿಸುತ್ತಿದ್ದು, ಸ್ಥಳೀಯ ಬಿಜೆಪಿ ಮುಖಂಡರನ್ನು ಓಲೈಸಿಕೊಳ್ಳಲು, ಎಲ್ಲರನ್ನೂ ಭೇಟಿಯಾಗುತ್ತಿದ್ದಾರೆ. ಸ್ಥಳೀಯ ಮುಖಂಡರಿಂದ ರಾಜ್ಯ ಬಿಜೆಪಿ ಮುಖಂಡರಿಗೆ ಒತ್ತಡ ಹಾಕಿಸಿ, ಬಿಜೆಪಿಯಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಪಡೆಯುವುದು ಶಿವರಾಂ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. 

ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ ಆರ್.ಧ್ರುವನಾರಾಯಣ್ ಹಾಲಿ ಸಂಸದರಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 

ಇದೀಗ ಕೈ ಭದ್ರ ಕೋಟೆಯಲ್ಲಿ ಕಮಲವನ್ನು ಅರಳಿಸುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಕೆ.ಶಿವರಾಂ ಪ್ಲಾನ್ ಮಾಡುತ್ತಿದ್ದಾರೆ.