ತೆಲಂಗಾಣ[ಡಿ.11]: ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಚುನಾವನೋತ್ತರ ಸಮೀಕ್ಷೆಗಳ ಅನ್ವಯ ಕೆ. ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷ ಬಹುಮತ ಪಡೆದು ಗೆಲುವಿನ ನಗೆ ಬೀರಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್, ಟಿಡಿಪಿ ಹಾಗೂ ಇತರ ಪಕ್ಷಗಳಿಗೆ ಭಾರೀ ಸೋಲಾಗಿದೆ. ಮತ್ತೊಂದೆಡೆ ತೆಲಂಗಾಣಕ್ಕೆ ತಾನೇ ಅಧಿಪತಿ ಎಂಬುವುದನ್ನು ಕೆಸಿಆರ್ ಸಾಬೀತುಪಡಿಸಿದ್ದಾರೆ.

ಒಟ್ಟು 119 ವಿಧಾನಸಭಾ ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಅಧಿಕಾರಕ್ಕೇರಲು ಬೇಕಾದ ಮ್ಯಾಜಿಕ್ ಸಂಖ್ಯೆ 60 ಆಗಿತ್ತು. ಆದರೆ ಕೆ. ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್‌ ಪಕ್ಷವು ಬರೋಬ್ಬರಿ 88 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ ಹಾಗೂ ಇಲ್ಲಿನ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿ, ಚುನಾವಣೆ ನಡೆಸಿದ್ದು ಟಿಆರ್ ಎಸ್ ಪಕ್ಷಕ್ಕೆ ಲಾಭ ತಂದುಕೊಟ್ಟಿದೆ. 

ಆಂಧ್ರಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ರೂಪುಗೊಂಡ ತೆಲಂಗಾಣಕ್ಕೆ ಇದು ಎರಡನೇ ವಿಧಾನಸಭಾ ಚುನಾವಣೆ. ಈ ಹಿಂದೆ ನಡೆದ ಚುನಾವಣೆಯಲ್ಲೂ ಕೆಸಿಆರ್ ನೇತೃತ್ವದ ಟಿಆರ್‌ಎಸ್ ಇತರೆಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಜಯಭೇರಿ ಭಾರಿಸಿತ್ತು. ಈ ಬಾರಿಯೂ ಕೆಸಿಆರ್ ಪಕ್ಷ ಇತರ ಯಾವುದೇ ಪಕ್ಷಗಳಿಗೂ ಸರ್ಕಾರ ರಚಿಸುವ ಅವಕಾಶವನ್ನೇ ನೀಡಿಲ್ಲ. ಮೈತ್ರಿ  ಪಕ್ಷಗಳು ಒಟ್ಟಾರೆ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಅತ್ತ ಬಿಜೆಪಿ ಕೇವಲ ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಮೈತ್ರಿ ಪಕ್ಷಗಳ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿರುವ ಸಿಎಂ ಕೆಸಿಆರ್ ಮಗಳು ಹಾಗೂ ಟಿಆರ್​ಎಸ್​ ಸಂಸದೆ ಕೆ.ಕವಿತಾ 'ತೆಲಂಗಾಣದಲ್ಲಿ ಕೆಸಿಆರ್ ಬಹುಮತ ಸಾಧಿಸುವುದರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುವುರದಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕೆಸಿಆರ್ ಗೆ ತೆಲಂಗಾಣ ಗೊತ್ತು. ಇಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ ಯಾಕೆಂದರೆ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ತೆಲ್ಲಂಗಾಣ ಜನತೆ ಅಭಿವೃದ್ಧಿಗೆ ಮತ ನೀಡಿದ್ದಾರೆ. ಕೆಸಿಆರ್ ಕಠಿಣ ಪರಿಶ್ರಮ ಫಲ ನೀಡಿದೆ. ತೆಲಂಗಾಣದಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು ಹಾಗೂ 'ತೆಲಂಗಾಣ ಪ್ರೈಡ್' ಇವೆರಡೂ ಪಕ್ಷಕ್ಕೆ ಲಾಭ ತಂದುಕೊಟ್ಟಿವೆ. ಹೀಗಿದ್ದರೂ ತೆಲಂಗಾಣದಲ್ಲಿ ನೇರ ಹಣಾಹಣಿ ಏರ್ಪಡಲಿದೆ ಎಂದು ಮಾಧ್ಯಮಗಳು ಬಿಂಬಿಸಿದ್ದವು. ಆದರೆ ಇದೆಲ್ಲವೂ ಸುಳ್ಳಾಯ್ತು ದೊಡ್ಡ ಮಟ್ಟದ ಗೆಲುವು ನಮ್ಮದಾಯಿತು. ಕಳೆದ ಎರಡು ತಿಂಗಳ ಹಿಂದೆ ತೆಲಂಗಾಣ ಚುನಾವಣೆ ಬಗ್ಗೆ ಮಾಧ್ಯಮಗಳು ಹೆಚ್ಚು ಗಮನ ಹರಿಸಿರಲಿಲ್ಲ. ಆದರೆ, ಯಾವಾಗ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾಂಗ್ರೆಸ್​ ಸೇರಿದಂತೆ ಇತರ ಪಕ್ಷಗಳನ್ನು ಒಗ್ಗೂಡಿಸಿ ತೆಲಂಗಾಣ ಚುನಾವಣಾ ಅಖಾಡಕ್ಕೆ ದುಮುಕಿದರೋ ಅಂದು ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಮಾಧ್ಯಮಗಳು ಬಿಂಬಿಸಲಾರಂಭಿಸಿದವು. ನಾಯ್ಡು ಅದ್ಬುತವಾದ ಮಾಧ್ಯಮ ನಿರ್ವಹಣೆಕಾರರು. ಆದರೆ, ಹೀನಾಯವಾಗಿ ಸೋಲುಂಡಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.

ತೆಲ್ಲಂಗಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ತಾವು ಅಧಿಕಾರ ಪಡೆಯಬೇಕೆಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಯೋಜನೆ ರೂಪಿಸಿದ್ದವು. ಒಂದೆಡೆ ಓವೈಸಿ ಟಿಆರ್ಎಸ್ ಗೆ ಬೆಂಬಲ ನೀಡುವ ಸೂಚನೆ ನೀಡಿದ್ದರೆ, ಇತ್ತ ಕಾಂಗ್ರೆಸ್ ಓವೈಸಿಗೆ ಬೆಂಬಲಿಸುವ ಸೂಚನೆ ನೀಡಿತ್ತು. ಈ ನಡುವೆ ಬಿಜೆಪಿ ಕೂಡಾ ಕೆಸಿಆರ್ ಬೆಂಬಲಿಸುವ ಸೂಚನೆ ನೀಡಿತ್ತು. ಆದರೀಗ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿದ್ದು, ಟಿಆರ್ ಎಸ್ ಸರಳ ಬಹುಮತ ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಹತ್ವದ ಪಾತ್ರ ನಿಭಾಯಿಸುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ.