ನವದೆಹಲಿ[ಫೆ.19]: ದೇಶದಲ್ಲಿ ಸರಣಿಯಾಗಿ ಭಯೋತ್ಪಾದಕ ದಾಳಿ ಸಂಘಟಿಸುವ ಮೂಲಕ ಭೀತಿ ಹುಟ್ಟಿಸುವ ಭ್ರಮೆಯಲ್ಲಿರುವ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಹೆದರುಪುಕ್ಕಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಪೋರ್ಚುಗೀಸ್‌ ಪಾಸ್‌ಪೋರ್ಟ್‌ ಮೇಲೆ ಕಾಶ್ಮೀರಕ್ಕೆ ಆಗಮಿಸಿ 1994ರಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ವಿಚಾರಣೆಗೊಳಪಡಿಸಿದ ಅಧಿಕಾರಿ ಹೇಳುವ ಪ್ರಕಾರ, ‘ಮೌಲಾನಾ ಮಸೂದ್‌ ಅಜರ್‌ ವಿಚಾರಣೆಗೆ ನಾವು ಹೆಚ್ಚು ಕಷ್ಟಪಡಲಿಲ್ಲ. ಯೋಧರೊಬ್ಬರು ಕಪಾಳಕ್ಕೆ ಒಂದು ಏಟು ಬಾರಿಸುತ್ತಿದ್ದಂತೆ ಹೆದರಿ, ಉಗ್ರರ ಚಟುವಟಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಹೇಳಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾರಿದ್ದ ಪರೋಕ್ಷ ಯುದ್ಧದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಪರದಾಡುತ್ತಿದ್ದಾಗ, ಮಸೂದ್‌ ಅಜರ್‌ ಉಗ್ರರ ನೇಮಕಾತಿ, ಭಯೋತ್ಪಾದಕ ಸಂಘಟನೆಗಳ ಕಾಯನಿರ್ವಹಣೆ ಕುರಿತು ಅಮೂಲ್ಯ ಮಾಹಿತಿ ನೀಡಿದ್ದ. ಇದಕ್ಕಾಗಿ ಆತನಿಗೆ ಬಲಪ್ರಯೋಗ ಏನನ್ನೂ ಮಾಡಲಿಲ್ಲ. ಒಂದೇ ಏಟಿಗೆ ಆತ ಮಾಹಿತಿ ಕೊಟ್ಟಿದ್ದ ಎಂದು ಗುಪ್ತಚರ ದಳದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಸಿಕ್ಕಿಂನ ನಿವೃತ್ತ ಡಿಜಿಪಿ ಅವಿನಾಶ್‌ ಮೊಹನಾನಿ ತಿಳಿಸಿದ್ದಾರೆ.