ಪ್ಯಾರಿಸ್‌[ಜು.03]: ಕಳೆದ ಜೂನ್‌ ತಿಂಗಳಲ್ಲಿ ದಾಖಲಾದ ಬಿಸಿಲು, ಇದುವರೆಗೆ ವಿಶ್ವದಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನದ ತಿಂಗಳು ಎಂಬ ದಾಖಲೆ ಬರೆದಿದೆ. ಯುರೋಪಿಯನ್‌ ಯೂನಿಯನ್‌ನ ಕೋಪರ್ನಿಕಸ್‌ ಹವಾಮಾನ ಬದಲಾವಣೆ ಸೇವೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಯುರೋಪ್‌ನಲ್ಲಿ ಜೂನ್‌ ತಿಂಗಳ ತಾಪಮಾನ ಸಾಮಾನ್ಯಕ್ಕಿಂತ ಶೇ.2 ಡಿಗ್ರಿ ಸೆಲ್ಷಿಯಸ್‌ನಷ್ಟುಹೆಚ್ಚಳ ಕಂಡು ಬಂದಿದೆ.

ಜೊತೆಗೆ ಜಾಗತಿಕ ಮಟ್ಟದಲ್ಲಿ ಭೂಮಿಯ ತಾಪಮಾನವು ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ ಶೆ.0.1 ಸೆಲ್ಷಿಯಸ್‌ನಷ್ಟುಏರಿಕೆಯಾಗಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.

ಕಳೆದ ವಾರ ಯುರೋಪ್‌ನ ಬಹುತೇಕ ದೇಶಗಳಲ್ಲಿ ಭಾರೀ ಉಷ್ಣಾಂಶ ಕಂಡುಬಂದಿತ್ತು. ಸಹಾರಾ ಮರುಭೂಮಿಯಲ್ಲಿ ಕಂಡುಬಂದ ಬಿಸಿಗಾಳಿ ಇದಕ್ಕೆ ಕಾರಣವಾಗಿತ್ತು. ಅದರಲ್ಲೂ ಫ್ರಾನ್ಸ್‌, ಜರ್ಮನಿ, ಉತ್ತರ ಸ್ಪೇನ್‌ ಮತ್ತು ಇಟಲಿಯಲ್ಲಿ ಸಾಮಾನ್ಯ ತಾಪಮಾನದಲ್ಲಿ 10 ಡಿ.ಸೆ.ನಷ್ಟುಭಾರೀ ಏರಿಕೆ ಕಂಡುಬಂದಿತ್ತು. ಫ್ರಾನ್ಸ್‌ನಲ್ಲಿ 45.9 ಡಿಗ್ರಿ ಸೆಲ್ಷಿಯಸ್‌ ಉಷ್ಣಾಂಶ ದಾಖಲಾಗಿದ್ದು, ಸಾರ್ವಕಾಲಿಕ ದಾಖಲೆ ಎನಿಸಿಕೊಂಡಿತ್ತು ಎಂದು ವರದಿ ಹೇಳಿದೆ.

850​-1900ರ ಮೂಲ ಸರಾಸರಿಗೆ ಹೋಲಿಸಿದರೆ 2019ರ ಜೂನ್‌ನಲ್ಲಿ ಯುರೋಪ್‌ನೆಲ್ಲೆಡೆ 3 ಡಿಗ್ರಿ ಸೆಲ್ಷಿಯಸ್‌ನಷ್ಟುಅಧಿಕ ಉಷ್ಟಾಂಶ ದಾಖಲಾಗಿರುವುದು ಉಪಗ್ರಹದ ದತ್ತಾಂಶ ತಾಪಮಾನ ಪಟ್ಟಿಯಲ್ಲಿ ಕಂಡುಬಂದಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಇಂತಹ ಹಲವಾರು ಸನ್ನಿವೇಶಗಳನ್ನು ಎದುರಿಸಬೇಕಾಗಿ ಬಂದೀತು ಎಂದು ಯುರೋಪ್‌ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.