ಜೂನ್ 10 ಕ್ಕೆ ಭಾರತ್ ಬಂದ್

June 10 Bharath Band
Highlights

ಕಳೆದ ತಿಂಗಳಷ್ಟೇ ಮಹಾರಾಷ್ಟ್ರದಲ್ಲಿ ಭಾರಿ ಪ್ರತಿಭಟನೆ ನಡೆಸಿ ದೇಶಾದ್ಯಂತ ಸುದ್ದಿ ಮಾಡಿದ್ದ ರೈತರು ಇದೀಗ ಕೇಂದ್ರ ಸರ್ಕಾರದ  ವಿರುದ್ಧ ಜೂನ್ 1 ರಿಂದ 10 ದಿನಗಳ ಕಾಲ ದೇಶವ್ಯಾಪಿ ಬೃಹತ್ ಆಂದೋಲನ ನಡೆಸುವುದಾಗಿ ಪ್ರಕಟಿಸಿದ್ದಾರೆ. 

ನವದೆಹಲಿ (ಮೇ.01): ಕಳೆದ ತಿಂಗಳಷ್ಟೇ ಮಹಾರಾಷ್ಟ್ರದಲ್ಲಿ ಭಾರಿ ಪ್ರತಿಭಟನೆ ನಡೆಸಿ ದೇಶಾದ್ಯಂತ ಸುದ್ದಿ ಮಾಡಿದ್ದ ರೈತರು ಇದೀಗ ಕೇಂದ್ರ ಸರ್ಕಾರದ  ವಿರುದ್ಧ ಜೂನ್ 1 ರಿಂದ 10 ದಿನಗಳ ಕಾಲ ದೇಶವ್ಯಾಪಿ ಬೃಹತ್ ಆಂದೋಲನ ನಡೆಸುವುದಾಗಿ ಪ್ರಕಟಿಸಿದ್ದಾರೆ. 

ದೇಶದ ಎಲ್ಲೆಡೆ ಇರುವ 110 ರೈತ ಸಂಘಗಳ ಒಕ್ಕೂಟವಾಗಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘ ಈ ಆಂದೋಲನ ನಡೆಸಲಿದ್ದು, ಜೂ.10 ಕ್ಕೆ ಭಾರತ ಬಂದ್‌ಗೆ ಕರೆ ನೀಡಿದೆ. ಆಂದೋಲನದ ಅಂಗವಾಗಿ ಜೂನ್ 1ರಿಂದ ಜೂನ್ 10 ರವರೆಗೆ ದೇಶದ ಎಲ್ಲೆಡೆ ರೈತರು ನಗರಗಳಿಗೆ ಹಾಲು, ಹಣ್ಣು, ತರಕಾರಿ, ಆಹಾರ ಧಾನ್ಯ ಸೇರಿದಂತೆ ಎಲ್ಲಾ  ರೀತಿಯ ಕೃಷ್ಯುತ್ಪನ್ನಗಳ ಪೂರೈಕೆಯನ್ನು ಸ್ಥಗಿತಗೊಳಿಸಲಿದ್ದಾರೆ. ನಂತರ ಜೂ.10 ರಂದು ಮಧ್ಯಾಹ್ನ 2 ಗಂಟೆಯವರೆಗೆ ಭಾರತ ಬಂದ್ ನಡೆಸಲಿದ್ದಾರೆ ಎಂದು ಕೇಂದ್ರದ ಮಾಜಿ  ಸಚಿವ, ಇತ್ತೀಚೆಗಷ್ಟೇ ಬಿಜೆಪಿ ತೊರೆದಿರುವ ಯಶವಂತ ಸಿನ್ಹಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಕಟಿಸಿದ ಕನಿಷ್ಠ ಬೆಂಬಲ ಬೆಲೆ ಸಾಲದು. ಅದೂ ಕೂಡ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ರೈತ  ವಿರೋಧಿ ನೀತಿಗಳನ್ನು ವಿರೋಧಿಸಿ, ವೈಜ್ಞಾನಿಕವಾದ ಕನಿಷ್ಠ ಬೆಂಬಲ ಬೆಲೆ ಹಾಗೂ ದೇಶವ್ಯಾಪಿ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ 10 ದಿನಗಳ ಬಂದ್‌ಗೆ ಕರೆ ನೀಡಿರುವುದಾಗಿ ಸಿನ್ಹಾ ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ರೈತರು ಆಯಾ ವರ್ಷ ಕೃಷಿ ಚಟುವಟಿಕೆಗೆ ಮಾಡಿದ ವೆಚ್ಚಕ್ಕಿಂತ ಶೇ.50 ರಷ್ಟು ಹೆಚ್ಚು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ರೈತರಿಗೆ ಕೃಷಿ  ಚಟುವಟಿಕೆಯ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ನೀಡಬೇಕು ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು.

ಕೇಂದ್ರ ಸರ್ಕಾರ ಎ2+ಎಫ್‌ಎಲ್ ಸೂತ್ರದನ್ವಯ ಬೆಂಬಲ ಬೆಲೆ ನೀಡುತ್ತೇವೆ ಎನ್ನುತ್ತಿದೆ. ಎ2 ಅಂದರೆ ಬೀಜ, ಗೊಬ್ಬರ, ರಾಸಾಯನಿಕ, ಕೂಲಿ, ಇಂಧನ ಹಾಗೂ ನೀರಾವರಿಗೆ ಮಾಡಿದ ವೆಚ್ಚ. ಎಫ್‌ಎಲ್ ಅಂದರೆ ರೈತನ ಕುಟುಂಬದವರು ಮಾಡಿದ ಸಂಬಳರಹಿತ ಕೆಲಸ. ನಾವು ರೈತರು ಸಿ2 ಸೂತ್ರದಲ್ಲಿ ಬೆಂಬಲ ಬೆಲೆ ಕೇಳುತ್ತಿದ್ದೇವೆ. ಸಿ2 ಅಂದರೆ ಎ2+ಎಫ್‌ಎಲ್ ಹಾಗೂ ಕೃಷಿ ಭೂಮಿಯ ಗುತ್ತಿಗೆ ಮೌಲ್ಯ, ಸ್ವಂತ ಭೂಮಿ  ಮತ್ತು ಸ್ಥಿರಾಸ್ತಿಗಳ ಮೇಲೆ ಲೆಕ್ಕ ಹಾಕದೆ ಬಿಟ್ಟಿರುವ ಬಡ್ಡಿ ಇವೆಲ್ಲವೂ ಸೇರಿದ ಮೊತ್ತ. ಈ ಮೊತ್ತವನ್ನು ಬೆಂಬಲ ಬೆಲೆಯಾಗಿ ನೀಡಬೇಕು ಎಂದು ರಾಷ್ಟ್ರೀಯ ಕಿಸಾನ್ ಮಹಾಸಂಘ ಪಟ್ಟು ಹಿಡಿದಿದೆ. 

loader