ಸಿವಾನ್, ಬಿಹಾರ(ಸೆ. 21): ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಅಜಯ್ ಕುಮಾರ್ ಶ್ರೀವಾಸ್ತವ ಅವರು ಸಿವಾನ್ ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಮಾಮೂಲಿಯಂತೆ ನ್ಯಾಯಾಧೀಶರ ಟ್ರಾನ್ಸ್'ಫರ್ ಆಗಿದ್ದರೆ ವಿಶೇಷತೆ ಇರಲಿಲ್ಲ. ಆದರೆ ಇವರು ಡಬಲ್ ಮರ್ಡರ್ ಕೇಸ್'ನಲ್ಲಿ ಆರ್'ಜೆಡಿ ಮುಖಂಡ ಮೊಹಮ್ಮದ್ ಶಹಾಬುದ್ದೀನ್'ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ಇದೀಗ ಶಹಾಬುದ್ದೀನ್'ಗೆ ಜಾಮೀನು ಸಿಕ್ಕ ಎರಡೇ ದಿನದಲ್ಲಿ ನ್ಯಾಯಮೂರ್ತಿಗಳು ಭೀತಿಯಿಂದ ಸಿವಾನ್ ಜಿಲ್ಲೆಯನ್ನೇ ತೊರೆದಿದ್ದಾರೆನ್ನಲಾಗಿದೆ.
ಸೆ. 7ರಂದು ಶಹಾಬುದ್ದೀನ್'ಗೆ ಜಾಮೀನು ನೀಡಲಾಗಿತ್ತು. ಸೆ. 10ರಂದು ಅವರು ಜೈಲಿನಿಂದ ಬಿಡುಗಡೆ ಹೊಂದಿದ್ದರು. ಇತ್ತ, ನ್ಯಾ| ಅಜಯ್ ಕುಮಾರ್ ಶ್ರೀವಾಸ್ತವ ಅವರು ಶಹಾಬುದ್ದೀನ್'ಗೆ ಜಾಮೀನು ದೊರಕಿದ್ದು ಗೊತ್ತಾಗುತ್ತಲೇ ತನಗೆ ಪಾಟ್ನಾದ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಹೈಕೋರ್ಟ್'ನಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಸೆ.9ರಂದು ಹೈಕೋರ್ಟ್ ಅಸ್ತು ಎಂದಿತು.
ಶಹಾಬುದ್ದೀನ್'ಗೆ ಜಾಮೀನು ಸಿಕ್ಕಿರುವುದು ನ್ಯಾಯಾಧೀಶರನ್ನೇ ಭಯಗ್ರಸ್ತರನ್ನಾಗಿ ಮಾಡಿದೆ ಎಂದ ಮೇಲೆ ಸಾಮಾನ್ಯರ ಕಥೆ ಏನು? ಸಿವಾನ್ ನಗರದ ಜನರು ಭೀತಿಯ ಮಡುವಿನಲ್ಲಿದ್ದಾರೆ. ಶಹಾಬುದ್ದೀನ್ ದೋಷಿ ಎನಿಸಿರುವ ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿಗಳ ಕುಟುಂಬಗಳಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
