ನವದೆಹಲಿ[ಮೇ.30]: ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಪುಟ ಸೇರ್ಪಡೆ ಸುದ್ದಿಗಳ ಬೆನ್ನಲ್ಲೇ, ನೂತನ ಅಧ್ಯಕ್ಷರ ಗಾದಿ ಪಕ್ಷದ ಇನ್ನೋರ್ವ ಹಿರಿಯ ನಾಯಕ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಒಲಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಮೋದಿ ಮತ್ತು ಶಾ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿರುವ ನಡ್ಡಾ ರಾಜ್ಯಸಭಾ ಸದಸ್ಯರಾಗಿದ್ದು, ಬಿಜೆಪಿ ಸಂಸದೀಯ ಮಂಡಳಿಯ ಕಾರ್ಯದರ್ಶಿಯೂ ಆಗಿದ್ದಾರೆ. ಪಕ್ಷದ ರಣತಂತ್ರ ರೂಪಿಸುವುದರಲ್ಲಿ ಶಾ ಅವರನ್ನು ಬಿಟ್ಟರೆ ಮತ್ತೊಂದು ದೊಡ್ಡ ಹೆಸರು ನಡ್ಡಾರದ್ದು. ಹೀಗಾಗಿಯೇ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಉ.ಪ್ರದೇಶದ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿತ್ತು. ಈ ನಂಬಿಕೆ ಹುಸಿಮಾಡದ ನಡ್ಡಾ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಪಕ್ಷಕ್ಕೆ 80ರ ಪೈಕಿ 62 ಸ್ಥಾನ ತಂದುಕೊಟ್ಟಿದ್ದರು.

ಇನ್ನು ಶಾ ಕೇಂದ್ರ ಸಚಿವರಾದರೂ, ಪಕ್ಷದ ರಣತಂತ್ರ ರೂಪಿಸುವಲ್ಲಿ ಅವರೇ ಮುಂಚೂಣಿ ಪಾತ್ರ ವಹಿಸುವ ಎಲ್ಲಾ ಸಾಧ್ಯತೆಗಳಿವೆ. ಜೊತೆಗೆ ಮಹಾರಾಷ್ಟ್ರ, ಜಾರ್ಖಂಡ್‌ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಗಳು ಮುಗಿಯುವವರೆಗೂ ಅಮಿತ್‌ ಶಾ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.

ಮುಂಬರುವ ಮೂರು ರಾಜ್ಯಗಳ ಚುನಾವಣೆಯನ್ನು ಅಮಿತ್‌ ಶಾ ಅವರ ಜೊತೆಗೂಡಿ ಜೆ.ಪಿ.ನಡ್ಡಾ ನಿಭಾಯಿಸಲಿದ್ದಾರೆ. ಆನಂತರ ನಡೆಯಲಿರುವ ಜಮ್ಮು- ಕಾಶ್ಮೀರ ಮತ್ತು ಒಂದು ವೇಳೆ ಸಮ್ಮಿಶ್ರ ಸರ್ಕಾರ ಪತನಗೊಂಡು ಚುನಾವಣೆ ಎದುರಾದರೆ ಕರ್ನಾಟಕ ಹಾಗೂ ಮುಂದಿನ ವರ್ಷ ನಡೆಯಲಿರುವ ದೆಹಲಿ ಚುನಾವಣೆಗಳ ದೆಹಲಿ ಚುನಾವಣೆಯನ್ನು ನಿಭಾಯಿಸುವ ಹೊಣೆ ನಡ್ಡಾ ಅವರ ಹೆಗಲೇರಲಿದೆ.