ಹೋರಾಟದಲ್ಲಿ ಇಲ್ಲದವರಿಗೂ ನೋಟೀಸ್ ಜಾರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 108 ಆ್ಯಂಬುಲೆನ್ಸ್ ಸಿಬ್ಬಂದಿ ಕುಮಾರ್ ಬಾರ್ಕೇರಾ, ತೋರಣಗಲ್'ನ ಎಂಜಿನಿಯರ್ ಚರಣರಾಜ್ ಜಾಣಮಟ್ಟಿ, ಗುಜರಾತ್ ಗಡಿಯಲ್ಲಿರುವ ಸೈನಿಕ ಶಂಕರಗೌಡ ಸಿದ್ದನಗೌಡ್ರ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಗದಗ(ಜುಲೈ 24): ರಾಜ್ಯದ ಸಿದ್ದರಾಮಯ್ಯ ಸರಕಾರ ಹೇಳೋದೊಂದು ಮಾಡೋದೊಂದಾ? ಈ ಪ್ರಶ್ನೆ ಕೇಳಲು ಮತ್ತೊಂದು ಸಂದರ್ಭ ಬಂದಿದೆ. ಮಹದಾಯಿಗಾಗಿ ಹೋರಾಟ ಮಾಡಿದ್ದಕ್ಕಾಗಿ 32 ಜನರ ಹೋರಾಟಗಾರರಿಗೆ ಕೋರ್ಟ್ ಸೂಚನೆ ನೀಡಿದೆ. ಜೆಎಂಎಫ್'ಸಿ ಕೋರ್ಟ್'ಗೆ ಇಂದೇ ಹಾಜರಾಗುವಂತೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ರೈತರ ವಿರುದ್ಧ ಹಾಕಿದ್ದ ಕೇಸನ್ನು ವಾಪಸ್ ಪಡೆದುಕೊಳ್ಳುತ್ತೇವೆಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಸುಳ್ಳಾ?

ಮಹದಾಯಿ, ಕಳಸಾ-ಬಂಡೂರಿ ನೀರು ಯೋಜನೆಗೆ ಆಗ್ರಹಿಸಿ ಗದಗ ಹಾಗೂ ಇನ್ನೂ ಕೆಲ ಜಿಲ್ಲೆಯ ರೈತರು ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ದೊಂಬಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮೊದಲಾದ ಆರೋಪಗಳನ್ನು ಹೊರಿಸಿ ಅನೇಕ ರೈತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈಗ ನೋಟೀಸ್ ಜಾರಿ ಮಾಡಿರುವ 32 ಮಂದಿ ಅಮಾಯಕರಾಗಿದ್ದು ಅವರು ಯಾವುದೇ ದೊಂಬಿ ನಡೆಸಿಲ್ಲವೆನ್ನಲಾಗಿದೆ. ಅಲ್ಲದೇ, ಹೋರಾಟದಲ್ಲಿ ಇಲ್ಲದವರಿಗೂ ನೋಟೀಸ್ ಜಾರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. 108 ಆ್ಯಂಬುಲೆನ್ಸ್ ಸಿಬ್ಬಂದಿ ಕುಮಾರ್ ಬಾರ್ಕೇರಾ, ತೋರಣಗಲ್'ನ ಎಂಜಿನಿಯರ್ ಚರಣರಾಜ್ ಜಾಣಮಟ್ಟಿ, ಗುಜರಾತ್ ಗಡಿಯಲ್ಲಿರುವ ಸೈನಿಕ ಶಂಕರಗೌಡ ಸಿದ್ದನಗೌಡ್ರ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಗದಗ್'ನ ರೈತರು ಸರಕಾರದ ಈ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.