ಶಿವಮೊಗ್ಗ [ಜು.2]:  ಬಳ್ಳಾರಿಯಿಂದಲೇ ಶಾಸಕರ ರಾಜೀನಾಮೆ ಪರ್ವ ಆರಂಭವಾಗಲಿದೆ ಎಂದು ಈ ಹಿಂದೆ ನಾನು ಹೇಳಿದ್ದ ಭವಿಷ್ಯ ನಿಜವಾಗಿದೆ. ಇದೀಗ ಬಳ್ಳಾರಿಯ ವಿಜಯನಗರ ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.

ಸುವರ್ಣನ್ಯೂಸ್‌ ಜತೆ ಮಾತನಾಡಿದ ಅವರು, ಜೂ.26ರಂದು ನಾನು ಬಳ್ಳಾರಿಯಲ್ಲಿದ್ದ ಸಂದರ್ಭದಲ್ಲಿ ಅಪೃತ್ತರ ರಾಜೀನಾಮೆ ಬಗ್ಗೆ ಹೇಳಿಕೆ ನೀಡಿದ್ದೆ. ಆನಂದ್‌ ಸಿಂಗ್‌ ರೀತಿ ಸಾಕಷ್ಟುಸ್ವಾಭಿಮಾನಿ ಶಾಸಕರು ಸಮ್ಮಿಶ್ರ ಸರ್ಕಾರದಲ್ಲಿದ್ದಾರೆ. ಸರ್ಕಾರ ಕೈಗೊಂಡಿರುವ ಅನೇಕ ನಿರ್ಣಯಗಳಿಂದ ಅವರು ಬೇಸರಗೊಂಡಿದ್ದಾರೆ. ಇಂತಹ ಕೆಟ್ಟಸರ್ಕಾರದೊಂದಿಗೆ ನಾವು ಇರಬೇಕಾ? ಎಂದು ಅವರಿಗೇ ಅನಿಸಿದೆ. ಇದೀಗ ಒಬ್ಬೊಬ್ಬರೇ ಆಚೆಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಒಂದೊಮ್ಮೆ ರಾಜೀನಾಮೆ ನೀಡಿರುವ ಕೈ ಶಾಸಕರು ಪಕ್ಷಕ್ಕೆ ಬರುವುದಾದರೇ, ವರಿಷ್ಠರು ಅದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ಜಿಂದಾಲ್‌ಗೆ ಭೂಮಿ ಹಸ್ತಾಂತರ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಜಿಂದಾಲ್‌ ಪರವಾಗಿ ಮಾತನಾಡಿದ್ದರು. ಈ ಮೂಲಕ ಸ್ವಾಭಿಮಾನಿಗಳಿಗೆ ಧಕ್ಕೆಯನ್ನುಂಟು ಮಾಡಿದ್ದರು. ಇದರಿಂದ ಬೇಸರಗೊಂಡು ಇದೀಗ ಆನಂದ್‌ಸಿಂಗ್‌ ರಾಜೀನಾಮೆ ನೀಡಿದ್ದಾರೆ. ಇದೀಗ ಡಿಕೆಶಿ, ಸಿಎಂ ಮಾತನಾಡಲಿ. ಆನಂದ್‌ಸಿಂಗ್‌ ರೀತಿ ಸರ್ಕಾರದ ಬಗ್ಗೆ ಬೇಸರವಿರುವ ಸಾಕಷ್ಟುಮಂದಿ ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿದ್ದಾರೆ. ಅವರೆಲ್ಲ ಇದೀಗ ಒಬ್ಬೊಬ್ಬರಾಗಿ ಆಚೆ ಬರಲಿದ್ದಾರೆ ಎಂದಿದ್ದಾರೆ.

ಯಾರನ್ನು ಸಂಪರ್ಕಿಸಿಲ್ಲ:

ಆನಂದ್‌ ಸಿಂಗ್‌ ಸೇರಿದಂತೆ ಯಾವ ಕಾಂಗ್ರೆಸ್‌ ಶಾಸಕರನ್ನು ನಾವು ಇದುವರೆಗೂ ಸಂಪರ್ಕ ಮಾಡಿಲ್ಲ. ಸರ್ಕಾರದ ಮೇಲಿನ ಅಸಮಾಧಾನದಿಂದ ಅವರಾಗಿಯೇ ರಾಜೀನಾಮೆ ಸಲ್ಲಿಸುತ್ತಿದ್ದಾರೆಯೋ ಹೊರತು, ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಈಶ್ವರಪ್ಪ, ಒಂದೊಮ್ಮೆ ರಾಜೀನಾಮೆ ನೀಡಿರುವ ಕೈ ಶಾಸಕರು ಪಕ್ಷಕ್ಕೆ ಬರುವುದಾದರೇ, ವರಿಷ್ಠರು ಅದರ ಬಗ್ಗೆ ಚರ್ಚಿಸಿ ತೀರ್ಮಾನಕೈಗೊಳ್ಳಲಿದ್ದಾರೆ ಎಂದಿದ್ದಾರೆ.