ಬೀದರ್‌ :  ಬಿಸಿಲ ಬೇಗೆಯಿಂದ ರಾಜ್ಯಾದ್ಯಂತ ಆವರಿಸಿರುವ ಜಲಕ್ಷಾಮದ ಬಿಸಿ ಈಗ ಬೀದರ್‌ನ ಐತಿಹಾಸಿಕ ಝರಣಿ ನರಸಿಂಹಸ್ವಾಮಿ ದೇವಸ್ಥಾನದ ಭಕ್ತರಿಗೂ ತಟ್ಟಿದೆ. ಎದೆಮಟ್ಟದ ನೀರಿನಲ್ಲಿ ಸುಮಾರು 300 ಮೀ. ದೂರ ಗುಹೆ​ಯಲ್ಲಿ ನಡೆ​ದು​ಕೊಂಡು ಹೋಗಿ ಝರಣಿ ನರ​ಸಿಂಹ ಸ್ವಾಮಿ ಉದ್ಭವ ಮೂರ್ತಿಯ ದರ್ಶನ ಪಡೆ​ಯುವುದೇ ಒಂದು ಪುಳಕ. ಆದರೆ, ಈ ಬಾರಿ ಗುಹೆಯಲ್ಲಿ ನೀರಿನ ಮಟ್ಟತೀವ್ರ ಇಳಿಮುಖವಾಗಿದ್ದರಿಂದ ಎರಡು ತಿಂಗಳಿಂದ ಭಕ್ತರಿಗೆ ನರಸಿಂಹ ಸ್ವಾಮಿ ದೇವರ ದರ್ಶನವೇ ಸಿಗದಂತಾಗಿದೆ.

ಬೀದರ್‌ ನಗ​ರ​ದಿಂದ ಸ್ವಲ್ಪವೇ ದೂರ​ದ​ಲ್ಲಿ​ರುವ ಝರಣಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ರಾಜ್ಯದಿಂದಷ್ಟೇ ಅಲ್ಲ, ಹೊರ ರಾಜ್ಯದಿಂದಲೂ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಮುಭಾಗದಲ್ಲಿರುವ ಗುಹೆಯ ಇನ್ನೊಂದು ತುದಿಯಲ್ಲಿ ಉದ್ಭವರೂಪದಲ್ಲಿರುವ ನರಸಿಂಹ ದೇವರ ದರ್ಶನ ಪಡೆ​ಯುತ್ತಾರೆ. ದೇಶದಲ್ಲೇ ವಿಶಿಷ್ಟವೆನಿಸುವ ಈ ಗುಹಾಂತರ ದೇವಾಲಯದಲ್ಲಿರುವ ನರಸಿಂಹಸ್ವಾಮಿಯನ್ನು ನೋಡಬೇಕಿದ್ದರೆ 300 ಅಡಿ ಉದ್ದದ, ಎದೆಮಟ್ಟದವರೆಗೆ ನೀರಿರುವ ಗುಹೆಯಲ್ಲಿ ಸಾಗಬೇಕು. ಈ ಗುಹೆಯಲ್ಲಿ ಕನಿಷ್ಠವೆಂದರೂ ನಾಲ್ಕೂವರೆ ಅಡಿಯಷ್ಟುನೀರು ಹರಿಯುತ್ತದೆ. ವಿಶೇಷವೆಂದರೆ ಹೆಚ್ಚುವರಿ ನೀರೇನಾದರೂ ಇಲ್ಲಿ ಸಂಗ್ರಹವಾದರೆ ಅದು ನೈಸರ್ಗಿಕವಾಗಿಯೇ ಹರಿದು ಹೊರ ಹೋಗುವ ವ್ಯವಸ್ಥೆಯೂ ಇದೆ. ಆದರೆ, ಸುಡುವ ಬಿಸಿಲ ಬೇಗೆಯ ಬಿಸಿ ಬೀದರ್‌ ಜಿಲ್ಲೆಯನ್ನು ಆವರಿಸಿದಷ್ಟೇ ತೀವ್ರವಾಗಿ ಈಗ ಝರಣಿ ನರಸಿಂಹಸ್ವಾಮಿ ದೇವಸ್ಥಾನಕ್ಕೂ ತಟ್ಟಿದೆ.

ದೇವಸ್ಥಾನದ ಗುಹೆಯಲ್ಲೀಗ ಒಂದು ಅಡಿಯಷ್ಟೂನೀರು ಇಲ್ಲ. ಹೀಗಾಗಿ ಹೊಸನೀರು ಬರುತ್ತಿಲ್ಲ, ಇರುವ ನೀರು ಹೊರಹೋಗುತ್ತಿಲ್ಲ ಎನ್ನುವ ಸ್ಥಿತಿ ಇದೆ.

ಇಂಥ ಪರಿಸ್ಥಿತಿಯಲ್ಲಿ ಭಕ್ತರಿಗೆ ಭಕ್ತ​ರಿಗೆ ಈ ಸುರಂಗದ ಮೂಲಕ ದೇವರ ದರ್ಶನಕ್ಕೆ ಪ್ರವೇಶ ನೀಡಿದರೆ ನಿಂತ ನೀರು ಮಲಿ​ನ​ವಾಗಿ ಸಾಂಕ್ರಾ​ಮಿಕ ರೋಗಕ್ಕೆ ಅವಕಾಶ ಮಾಡಿಕೊಡಬಹುದು, ಈ ನೀರು ಕೂಡ ಮಲಿನವಾಗಬುಹುದು ಎನ್ನುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ಜತೆಗೆ ಹೊಸ ನೀರಿನ ಜಿನುಗು ಇಲ್ಲದ ಕಾರಣ ಗುಹೆ ಬಿರುಕು ಬಿಡುವ ಹಾಗೂ ನಿಂತ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿದೆ. ದೇವರ ಪೂಜೆಗೆ ಯಾವುದೇ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಪ್ರತಿ ದಿನ ಪೂಜಾ​ರಿ​ಯೊ​ಬ್ಬರು ಮಾತ್ರ ಗುಹೆ​ಯೊಳಗೆ ಹೋಗಿ ನರ​ಸಿಂಹ ಸ್ವಾಮಿಗೆ ನಿತ್ಯದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ದೇಗುಲದ ಹೊರಗಿರುವ ಮೂರ್ತಿಗೆ ಕೈಮುಗಿದು ವಾಪಸ್‌ ಹೋಗುತ್ತಿದ್ದಾರೆ.

ಹಾಗೆ ನೋಡಿದರೆ ಈ ರೀತಿ ಗುಹೆಯಲ್ಲಿ ಈ ರೀತಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಇದೇ ಮೊದಲೇನಲ್ಲ. 2015ರಲ್ಲಿ ರಾಜ್ಯವನ್ನು ಭೀಕರ ಬರ ಆವರಿಸಿದಾಗಲೂ ನೀರಿನ ಅಭಾವದಿಂದ ಕ್ಷೇತ್ರದಲ್ಲಿ ಸುಮಾರು 20 ದಿನ​ಗಳ ಕಾಲ ನರ​ಸಿಂಹನ ದರ್ಶ​ನಕ್ಕೆ ನಿಷೇಧ ಹಾಕ​ಲಾ​ಗಿ​ತ್ತು. ಆದರೆ, ಈ ಬಾರಿ ಇಲ್ಲಿ 2 ತಿಂಗಳಾದರೂ ದೇವರ ದರ್ಶನ ಸಾಧ್ಯವಾಗಿಲ್ಲ.

ಕುಡಿಯಲೂ ನೀರಿಲ್ಲ: ಗುಹೆಯಲ್ಲಷ್ಟೇ ಅಲ್ಲ, ನಿತ್ಯ ಸಾವಿರಾರು ಭಕ್ತರು ಬರುವ ಈ ಕ್ಷೇತ್ರ​ದಲ್ಲಿ ಕುಡಿ​ಯಲು, ಶೌಚಕ್ಕೂ ನೀರಿಲ್ಲದ ಪರಿಸ್ಥಿತಿ ಇದೆ. ಹೆಚ್ಚುತ್ತಿರುವ ನಗರೀಕರಣ. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಅತಿಕ್ರಮಣಕ್ಕೆ ಒಳಪಟ್ಟು 250ಕ್ಕೂ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ನಗರಸಭೆಯಿಂದಲೇ ಎಲ್ಲೆಂದರಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದರಿಂದಲೂ ಗುಹೆಯ ಜಲ ಮಾರ್ಗದ ವೈಶಿಷ್ಟ್ಯತೆ ಕಳೆದು ಹೋಗುತ್ತಿದೆ ಎಂದು ಆರೋಪಿಸುತ್ತಾರೆ ಕೆಲ ಭಕ್ತರು.

ಗುಹಾಂತರ ಜಲ ಮಾರ್ಗದ ವೈಶಿಷ್ಟ್ಯತೆ ಇರುವ ಈ ದೇವಾಲಯದಲ್ಲಿ ನೀರಿನ ಬರ ಎದುರಾಗಿದೆ. ಸಂಪೂರ್ಣ ಕೆಂಪು ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಈ ಗುಹೆಯಲ್ಲಿ ನೀರಿರದಿದ್ದರೆ ಗುಹೆಯ ಗೋಡೆಗಳು ಕುಸಿಯುವ ಸಾಧ್ಯತೆಗಳಿವೆ.ಈ ಐತಿಹಾಸಿಕ ದೇವಸ್ಥಾನದ ಗುಹೆಗೆ ಕೊಳವೆ ಬಾವಿ ಮೂಲಕವಾದರೂ ಮಳೆಗಾಲದವರೆಗೆ ನೀರು ಪೂರೈಸಿ ಉಳಿಸಿಕೊಳ್ಳಬೇಕಾಗಿದೆ.

-ರಾಜು.ಬಿ, ಬೀದರ್‌, ದೇವ​ಸ್ಥಾನದ ಭಕ್ತ

ಝರಣಿ ನರಸಿಂಹ ದೇವಸ್ಥಾನಕ್ಕೆ ಹೋಗುವ ಗುಹೆಯಲ್ಲಿ ಜಲ ಕ್ಷಾಮದಿಂದಾಗಿ ಒಳ ಹರಿವು ಕಡಿಮೆಯಾಗಿದೆ. ಇದರಿಂದ ಗುಹೆಯ ಗೋಡೆಗಳು ಬಿರುಕು ಬಿಡುವ ಸಾಧ್ಯತೆಗಳಿರುವುದು ನಿಜ. ಆದರೆ, ಗುಹೆಯೊಳಗೆ ಕೃತಕವಾಗಿ ನೀರು ಹರಿಸಿ ಗೋಡೆಗಳಿಗೆ ನೀರುಣಿಸುವುದರಿಂದ ಹೆಚ್ಚಿನ ಲಾಭವೇನೂ ಆಗದು.

-ಡಾ.ಶಂಕರ ವಣಿಕ್ಯಾಳ, ಅಧ್ಯಕ್ಷರು, ಝರಣಿ ನರಸಿಂಹ ದೇವಸ್ಥಾನ ಸಮಿತಿ ಹಾಗೂ ಸಹಾಯಕ ಆಯುಕ್ತರು ಬೀದರ್‌

ಗಂಟೆಗೆ 30 ಸಾವಿರ ಲೀ.ನೀರು!

ಬೀದರ್‌ ನಗರದಿಂದ 4.8 ಕಿ.ಮೀ. ದೂರದ ಮಂಗಳಪೇಟೆಯಲ್ಲಿರುವ ಈ ಝರಣಿ ನರ​ಸಿಂಹ ಸ್ವಾಮಿ ದೇವಸ್ಥಾನ ತನ್ನದೇ ಆದ ಐತಿಹಾಸಿಕ ಹಿನ್ನಲೆ ಹೊಂದಿದೆ. ದೇಶದಲ್ಲೇ ವಿಶಿಷ್ಟಅನ್ನಬಹುದಾದ ಈ ದೇಗುಲದ ಗುಹೆಯಲ್ಲಿ ವರ್ಷವಿಡೀ ನೀರು ಹರಿಯುತ್ತಿರುತ್ತದೆ. ವಿಶೇಷವೆಂದರೆ ಮಾಮೂಲಿ ದಿನಗಳಲ್ಲಿ ಈ ಗುಹೆಯಲ್ಲಿ ಗಂಟೆಗೆ 30 ಸಾವಿರ ಲೀ. ನೀರು ಪ್ರಕೃತಿದತ್ತವಾಗಿ ಸಂಗ್ರಹವಾಗುತ್ತದೆ. ಆದರೆ, ಈ ಬೇಸಿಗೆಯಲ್ಲಿ ಈಗ ನಾಲ್ಕೈದು ಸಾವಿರ ಲೀ. ನೀರು ಕೂಡ ಇಲ್ಲ.

ದೇವಾಲಯದ ಐತಿಹ್ಯ

ಪುರಾಣ ಕಾಲದಲ್ಲಿ ಹಿರಣ್ಯ ಕಶಪುವಿನ ವಧೆಯ ಬಳಿಕ ನರಸಿಂಹ ದೇವರು ಜಲಾಸುರನನ್ನು ವಧೆ ಮಾಡಲು ಮುಂದಾಗುತ್ತಾರೆ. ಆಗ ಈ ಗುಹೆಯಲ್ಲಿ ಶಿವಲಿಂಗದ ಪೂಜೆ ಮಾಡುತ್ತಾ ಬಂದಿದ್ದ ಜಲಾಸುರನ ಕೊನೇ ಕೋರಿಕೆಯಾಗಿ ನರಸಿಂಹ ದೇವರೇ ಇಲ್ಲಿ ಬಂದು ನೆಲೆಸಬೇಕು. ಭಕ್ತರ ಇಷ್ಟಾರ್ಥ ಸಿದ್ಧಿ ನೆರವೇರಿಸಬೇಕು ಎಂದು ಕೋರಿಕೊಳ್ಳುತ್ತಾನೆ. ಅದರಂತೆ ಈ ಗುಹೆಯಲ್ಲಿ ಸರಹಿಂಸ ದೇವರು ಐಕ್ಯರಾದರೆಂಬುದು ಪ್ರತೀತಿ.

ವರದಿ :  ಅಪ್ಪಾರಾವ್‌ ಸೌದಿ