ಸೂರತ್‌: ದೀಪಾವಳಿ ಸೇರಿ ಲಕ್ಷ್ಮಿ, ಸರಸ್ವತಿ, ಗಣೇಶನ ಚಿತ್ರವಿರುವ ಬಂಗಾರ ಹಾಗೂ ಬೆಳ್ಳಿಯ ಗಟ್ಟಿಗಳನ್ನು ಖರೀದಿಸಿ ವಿಶೇಷವಾಗಿ ಪೂಜೆ ಮಾಡಲಾಗುತ್ತದೆ. ಆದರೆ ಗುಜರಾತ್‌ನ ವ್ಯಾಪಾರಿಯೊಬ್ಬರು ಈ ಬಾರಿ ದೀಪಾವಳಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರವಿರುವ ಬೆಳ್ಳಿ ಹಾಗೂ ಚಿನ್ನದ ಗಟ್ಟಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. 

ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆಯಂತೆ. ಈ ಕುರಿತು ಮಾತನಾಡಿದ ಗ್ರಾಹಕರೊಬ್ಬರು, ‘ಪ್ರತೀ ದೀಪಾವಳಿ ಪ್ರಯುಕ್ತ ಲಕ್ಷ್ಮೇದೇವಿ ಹಾಗೂ ಚತುರ್ಮುಖ ಗಣೇಶನನ್ನು ಪೂಜಿಸಿ ನೆನೆಯುವುದು ಸರ್ವೇಸಾಮಾನ್ಯ. ಅಷ್ಟೇ ಅಲ್ಲದೆ, ಪ್ರಧಾನಿ ಮೋದಿ ಅವರು ನಮಗೆ ದೇವರ ಸ್ವರೂಪವೇ. ಇದೇ ಕಾರಣಕ್ಕಾಗಿ ಮೋದಿ ಜೀ ಚಿತ್ರವಿರುವ ಬಂಗಾರದ ಗಟ್ಟಿಗಳನ್ನು ಖರೀದಿಸಿ, ಪೂಜಿಸಲು ನಿರ್ಧರಿಸಿದ್ದೇನೆ,’ ಎಂದಿದ್ದಾರೆ.

ಇದೇ ವರ್ಷದ ರಾಖಿ ಹಬ್ಬದ ಪ್ರಯುಕ್ತ ಬಂಗಾರದಿಂದ ಮಾಡಲಾದ ರಾಖಿಗಳಲ್ಲಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರುಪಾನಿ ಅವರ ಚಿತ್ರಗಳಿರುವ ಬಂಗಾರದ ರಾಖಿಗಳನ್ನು ಇದೇ ಚಿನ್ನಾಭರಣ ಮಳಿಗೆ ಮಾರುಕಟ್ಟೆಗೆ ಪರಿಚಯಿಸಿತ್ತು.