ರಾಜ್ಯದಲ್ಲಿ ಜೆಡಿಎಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಜೆಡಿಎಸ್‌ ಬೆಂಬಲಿಸಿದರೆ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹಾಸನ: ರಾಜ್ಯದಲ್ಲಿ ಜೆಡಿಎಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಜೆಡಿಎಸ್‌ ಬೆಂಬಲಿಸಿದರೆ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜನಾಶೀರ್ವಾದ ಸಭೆಯಲ್ಲಿ ಮಾತನಾಡಿ ಜೆಡಿಎಸ್‌ನವರು ಅವಕಾಶವಾದಿಗಳು, ಅವರನ್ನು ನಂಬಲಿಕ್ಕೆ ಹೋಗಬೇಡಿ. ಐದಾರು ಜಿಲ್ಲೆ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಆ ಪಕ್ಷಕ್ಕೆ ಅಸ್ತಿತ್ವ ಇಲ್ಲ. ಹಾಗಾಗಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ ಎಂಬುದು ದೇವೇಗೌಡರು ಸೇರಿ ಎಲ್ಲರಿಗೂ ಗೊತ್ತು, ಆದರೂ ನಾವು ‘ಕಿಂಗ್‌ ಮೇಕರ್‌’ ಆಗುತ್ತೇವೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್‌ನವರು ಕೋಮುವಾದ ವಿರೋಧಿಸುವುದು ಕೇವಲ ರಾಜಕೀಯಕ್ಕಾಗಿ, ಅವರಿಗೆ ಆ ವಿಚಾರದಲ್ಲಿ ಬದ್ಧತೆ ಇಲ್ಲ. ಇದನ್ನು ರಾಜ್ಯದ ರಾಜಕೀಯ ಇತಿಹಾಸ ಹೇಳುತ್ತದೆ. 2006ರಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಿಎಂ ಆಗಬೇಕು ಅನ್ನೋ ಒಂದೇ ಕಾರಣಕ್ಕೆ ಕೋಮುವಾದಿಗಳ ಜೊತೆ ಕೈ ಜೋಡಿಸಿದರು ಎಂದು ಸಿಎಂ ವಾಗ್ದಾಳಿ ನಡೆಸಿದರು.