ಚಂದ್ರಬಾಬು ನಾಯ್ಡು ಅವರಿಂದ ಮಾಯಾವತಿಗೆ ಹೇಳಿಸಲು ಎಚ್. ವಿಶ್ವನಾಥ್ ಹೈದರಾಬಾದ್‌ಗೆ  |  ಎನ್ ಮಹೇಶ್ ರಾಜಿನಾಮೆ ಹಿಂತೆಗೆಸಲು ಜೆಡಿಎಸ್ ಯತ್ನ 

ಬೆಂಗಳೂರು (ಅ. 14): ರಾಜ್ಯ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಮುಖಂಡ ಎನ್‌.ಮಹೇಶ್‌ ರಾಜೀನಾಮೆ ಪ್ರಹಸನಕ್ಕೆ ತೃತೀಯ ರಂಗದ ನಾಯಕರ ಮೂಲಕ ತೆರೆ ಎಳೆಯುವ ಪ್ರಯತ್ನವನ್ನು ಜೆಡಿಎಸ್‌ ನಡೆಸಿದೆ.

ದಿಢೀರ್‌ ಬೆಳವಣಿಗೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಶನಿವಾರ ಆಂಧ್ರಪ್ರದೇಶಕ್ಕೆ ಪ್ರಯಾಣಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಅವರು ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರ ಮನವೊಲಿಕೆಯ ಕಸರತ್ತು ನಡೆಸಿದ್ದಾರೆ.

ಚುನಾವಣೆಗೆ ಮೊದಲು ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕೆಲವು ದಲಿತ ಮತಗಳು ಜೆಡಿಎಸ್‌ಗೆ ಲಭ್ಯವಾಗಿವೆ. ಮಹೇಶ್‌ ರಾಜೀನಾಮೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಸಚಿವ ಸ್ಥಾನದಲ್ಲಿ ಮುಂದುವರಿಸುವಂತೆ ತೃತೀಯ ರಂಗದ ನಾಯಕರ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆದಿದೆ. ತೃತೀಯ ರಂಗ ಬಲಗೊಳ್ಳುವ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಸಹ ಕೈ ಜೋಡಿಸಿದ್ದಾರೆ.

ಅಲ್ಲದೇ, ಮಾಯಾವತಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರ ಮಾತಿಗೆ ಮಾಯಾವತಿ ಗೌರವ ನೀಡಿ ಮಹೇಶ್‌ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವಂತೆ ಸೂಚಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರು ಚಂದ್ರಬಾಬು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಹಿಂಪಡೆದ ಬೆನ್ನಲ್ಲೇ ನಡೆದ ಮಹೇಶ್‌ ರಾಜೀನಾಮೆಯ ಆಶ್ಚರ್ಯಕರ ಬೆಳವಣಿಗೆಯು ಇದಕ್ಕೆ ಪೂರಕವಾಗಿರುವುದು ಕಂಡುಬಂದಿದೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಸರ್ಕಾರದಲ್ಲಿ ಇರುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿಯ ಸೂಚನೆಯ ಮೇರೆಗೆ ಸಚಿವ ಮಹೇಶ್‌ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಬೇರೆ ರಾಜ್ಯದಲ್ಲಿನ ಪರಿಸ್ಥಿತಿಗೂ ಕರ್ನಾಟಕದಲ್ಲಿನ ಪರಿಸ್ಥಿತಿಗೂ ವ್ಯತ್ಯಾಸ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಅನಿವಾರ್ಯ ಕಾರಣಕ್ಕಾಗಿ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ಕಾರಣ ಬಿಎಸ್‌ಪಿಗೆ ಯಾವುದೇ ರೀತಿಯಲ್ಲಿಯೂ ಮುಜುಗರವಾಗುವುದಿಲ್ಲ. ಮಹೇಶ್‌ ಅವರು ರಾಜೀನಾಮೆ ಹಿಂಪಡೆಯದಿದ್ದರೆ ಬೇರೆಯದೇ ಸಂದೇಶ ರವಾನೆಯಾಗಲಿದೆ ಎನ್ನಲಾಗಿದೆ.

ಮಹೇಶ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎರಡು ದಿನ ಕಳೆದರೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇನ್ನೂ ಅಂಗೀಕರಿಸಿಲ್ಲ. ರಾಜೀನಾಮೆ ಹಿಂಪಡೆಯುವ ಬಗ್ಗೆ ಮನವೊಲಿಕೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಸಫಲವಾಗುವ ವಿಶ್ವಾಸದಲ್ಲಿ ಜೆಡಿಎಸ್‌ ನಾಯಕರು ಇದ್ದಾರೆ. ಮಹೇಶ್‌ ರಾಜೀನಾಮೆ ಸದ್ಯಕ್ಕೆ ಯಾವುದೇ ಪರಿಣಾಮ ಬೀರದಿದ್ದರೂ ಮುಂದಿನ ಲೋಕಸಭೆ ಚನಾವಣೆ ವೇಳೆ ಜೆಡಿಎಸ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ನಾಯಕರು ಲೆಕ್ಕಾಚಾರ ಹಾಕಿದ್ದಾರೆ.

ದಲಿತ ಮತಗಳು ಜೆಡಿಎಸ್‌ನಿಂದ ದೂರವಾಗುವ ಸಾಧ್ಯತೆ ಹೆಚ್ಚಿದೆ. ಮೈಸೂರು ಪ್ರಾಂತ್ಯದಲ್ಲಿ ಪಕ್ಷಕ್ಕೆ ಪೆಟ್ಟು ಕೊಡುವ ಸಾಧ್ಯತೆ ಇದೆ. ಇದನ್ನು ಮನಗಂಡ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ವಿಶ್ವನಾಥ್‌ ಅವರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರನ್ನು ಸಹ ವಿಶ್ವನಾಥ್‌ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಭಾನುವಾರ ಸಂಜೆಯ ವೇಳೆಗೆ ರಾಜ್ಯಕ್ಕೆ ಹಿಂತಿರುಗಲಿದ್ದಾರೆ ಎನ್ನಲಾಗಿದೆ.