Asianet Suvarna News Asianet Suvarna News

ಯುಗಾದಿಗೆ ಜೆಡಿಎಸ್‌ 2ನೇ ಪಟ್ಟಿ : 40 ಅಭ್ಯರ್ಥಿಗಳ ಪಟ್ಟಿಪ್ರಕಟಣೆಗೆ ಸಿದ್ಧತೆ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್‌ಗಿಂತ ಮೊದಲೇ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿರುವ ಜೆಡಿಎಸ್‌ ಇದೀಗ ಎರಡನೇ ಪಟ್ಟಿಬಿಡುಗಡೆಗೂ ಸನ್ನದ್ಧವಾಗಿದ್ದು, ಯುಗಾದಿ ಹಬ್ಬಕ್ಕೆ 40 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ತಯಾರಿ ನಡೆಸಿದೆ.

JDS to release second List of its candidates after Ugadi

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್‌ಗಿಂತ ಮೊದಲೇ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿರುವ ಜೆಡಿಎಸ್‌ ಇದೀಗ ಎರಡನೇ ಪಟ್ಟಿಬಿಡುಗಡೆಗೂ ಸನ್ನದ್ಧವಾಗಿದ್ದು, ಯುಗಾದಿ ಹಬ್ಬಕ್ಕೆ 40 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲು ತಯಾರಿ ನಡೆಸಿದೆ.

ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ 40 ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ನಡುವಿನ ಪೈಪೋಟಿ ಶಮನ ಮಾಡಲು ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಒಮ್ಮತ ಅಭಿಪ್ರಾಯಕ್ಕೆ ಬಂದು ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.

ಆದರೆ, ಚನ್ನಪಟ್ಟಣ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿಯೇ ಪ್ರಕಟಿಸಲಾಗುತ್ತದೆಯೋ ಅಥವಾ ಅಂತಿಮ ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆಯೋ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಪಕ್ಷದ ಮೂಲಗಳ ಪ್ರಕಾರ ಕುಟುಂಬ ರಾಜಕಾರಣದ ಗೊಂದಲ ತೀವ್ರಗೊಳ್ಳುವುದನ್ನು ತಡೆಗಟ್ಟುವ ಸಂಬಂಧ ಎರಡನೇ ಪಟ್ಟಿಯಲ್ಲಿಯೇ ಈ ಎರಡು ಕ್ಷೇತ್ರಗಳಿಗೂ ಬೇರೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸುವ ಉದ್ದೇಶವನ್ನು ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಂದಿದ್ದಾರೆÜ ಎಂಬ ಮಾತು ಕೇಳಿಬಂದಿದೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಕಣಕ್ಕಿಳಿಸುವ ಸಂಬಂಧ ಸಾಕಷ್ಟುಪ್ರಯತ್ನಗಳು ನಡೆದವು. ಅವರಿಬ್ಬರಿಗೆ ಟಿಕೆಟ್‌ ನೀಡುವ ಸಾಧ್ಯತೆಯೇ ಹೆಚ್ಚು ಎಂಬ ಕುತೂಹಲ ಸಹ ಮೂಡಿತ್ತು. ಆದರೆ, ಇದಕ್ಕೆಲ್ಲಾ ತೆರೆ ಎಳೆದಿರುವ ಕುಮಾರಸ್ವಾಮಿ, ಈಗಾಗಲೇ ಸ್ಪಷ್ಟಪಡಿಸಿರುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದಿಂದ ಇಬ್ಬರೇ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರಕ್ಕೆ ಸ್ಥಳೀಯ ನಾಯಕ ಜಯಮುತ್ತು, ನಿಜಲಿಂಗೇಗೌಡ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರದಿಂದ ಆರ್‌.ಪ್ರಕಾಶ್‌ ಹೆಸರು ಹರಿದಾಡುತ್ತಿದೆ. ಆದರೆ, ಪಕ್ಷದ ವರಿಷ್ಠರು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಬಂಡಾಯ ಶಾಸಕರ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲು ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರು ತಮ್ಮ ರಾಜಕೀಯ ಅನುಭವವನ್ನು ಪಣಕ್ಕಿಟ್ಟಿದ್ದಾರೆ. ಬಂಡಾಯ ಶಾಸಕರನ್ನು ಮಣಿಸಲು ಮಾಗಡಿ, ನಾಗಮಂಗಲ, ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಇನ್ನುಳಿದ ಕ್ಷೇತ್ರಗಳಿಗೆ ತೆರೆಮರೆಯಲ್ಲಿ ಹುಡುಕಾಟ ನಡೆಸಿದ್ದಾರೆ.

ಚಾಮರಾಜಪೇಟೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ದೇವೇಗೌಡರು, ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ವಿರುದ್ಧ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ. ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ನೀಡುವ ಸಾಧ್ಯತೆ ಇದೆಯಾದರೂ ಕಾಂಗ್ರೆಸ್‌ನ ಆಲ್ತಾಫ್‌ಗೂ ದೇವೇಗೌಡ ಅವರು ಗಾಳ ಹಾಕಿದ್ದಾರೆ. ಚಾಮರಾಜಪೇಟೆಯಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸದ ಕಾರಣ ಈ ಕ್ಷೇತ್ರದ ಅಭ್ಯರ್ಥಿಯನ್ನು ಮೂರನೇ ಹಂತದಲ್ಲಿ ಘೋಷಣೆ ಮಾಡಲಿದ್ದಾರೆ.

ರಾಜ್ಯದ ಹಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳಲ್ಲಿ ಒಮ್ಮತ ಮೂಡಿಬಾರದ ಕಾರಣ ವರಿಷ್ಠರಿಗೆ ಅಭ್ಯರ್ಥಿಗಳ ಅಂತಿಮಗೊಳಿಸುವುದು ತಲೆನೋವಾಗಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಉಪಯೋಗಿಸಲಾಗುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಶತಯಗತಾಯ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ರಾಷ್ಟ್ರೀಯ ಪಕ್ಷಗಳ ಪೈಪೋಟಿಗಿಳಿದಿರುವ ಜೆಡಿಎಸ್‌ ಗೆಲುವಿನ ಅಭ್ಯರ್ಥಿಗಳಿಗೆ ಮಣೆ ಹಾಕಿ ಟಿಕೆಟ್‌ ನೀಡಲಾಗುತ್ತಿದೆ. ಕಳೆದ ಎರಡು ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios