ತಮ್ಮ ವಿರುದ್ಧ ಬಹಿರಂಗವಾಗಿಯೇ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ ರುವ ಬಂಡಾಯ ಶಾಸಕರನ್ನು ಸುಲಭವಾಗಿ ಬಿಡದೆ ತಕ್ಕ ಪಾಠ ಕಲಿಸಬೇಕು ಎಂಬ ನಿಲುವಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ಬಂದಿದ್ದು, ಕಾಂಗ್ರೆಸ್‌ ಟಿಕೆಟ್‌ ಸಿಗದಂತೆ ತಪ್ಪಿಸುವ ದಿಕ್ಕಿನಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೆರೆಮರೆಯ ಅಥವಾ ಪರೋಕ್ಷ ಸ್ನೇಹ ಉಂಟಾದಲ್ಲಿ ಈ ಏಳು ಬಂಡಾಯ ಶಾಸಕರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ನೀಡದಂತೆ ಜೆಡಿಎಸ್ ವರಿಷ್ಠರು ಷರತ್ತು ವಿಧಿಸುವ ಸಂಭವವಿದೆ ಎಂಬ ಸುದ್ದಿ ಯೊಂದು ಹೊರಬಿದ್ದಿದೆ. ಇದು ಬಂಡಾಯ ಶಾಸಕರಲ್ಲಿ ಕಸಿವಿಸಿ ಉಂಟು ಮಾಡುವ ನಿರೀಕ್ಷೆಯಿದೆ.
ತಮ್ಮ ವಿರುದ್ಧ ಬಹಿರಂಗವಾಗಿಯೇ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿರುವ ಬಂಡಾಯ ಶಾಸಕರನ್ನು ಸುಲಭವಾಗಿ ಬಿಡದೆ ತಕ್ಕ ಪಾಠ ಕಲಿಸಬೇಕು ಎಂಬ ನಿಲುವಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಬಂದಿದ್ದು, ಕಾಂಗ್ರೆಸ್ ಟಿಕೆಟ್ ಸಿಗದಂತೆ ತಪ್ಪಿಸುವ ದಿಕ್ಕಿನಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಇದುವರೆಗಿನ ಬೆಳವಣಿಗೆ ಅನುಸಾರ ಬಂಡಾಯ ಶಾಸಕರಾದ ಚಲುವರಾಯ ಸ್ವಾಮಿ, ಜಮೀರ್ ಅಹಮದ್, ಎಚ್.ಸಿ. ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ, ಭೀಮಾನಾಯಕ್, ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಬಗ್ಗೆ ತಾತ್ವಿಕ ಒಪ್ಪಿಗೆ ದೊರೆತಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಬಂಡಾಯ ಶಾಸಕರು ಯಾರ ಮುಲಾಜಿಲ್ಲದೆ ಸಾಕಷ್ಟು ವಿಶ್ವಾಸದಿಂದ ಓಡಾಡಿಕೊಂಡಿದ್ದರು. ಜೆಡಿಎಸ್ ನಾಯಕರ ವಿರುದ್ಧ ಬಹಿರಂಗ ವಾಗಿಯೇ ಹರಿಹಾಯತೊಡಗಿದ್ದರು.ಇದು ದೇವೇಗೌಡರಿಗೆ ಕಡು ಕೋಪ ತರಿಸಿದೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿಯೇ ತಂತ್ರ ರೂಪಿಸುತ್ತಿರುವ ಗೌಡರು, ಬಂಡಾಯ ಶಾಸಕರಿಗೆ ಆಯಾ ಶಾಸಕರ ಕ್ಷೇತ್ರಗಳಲ್ಲಿ ಪಕ್ಷದಿಂದ ಪ್ರಬಲ ಸ್ಪರ್ಧಿಗಳನ್ನೇ ಕಣಕ್ಕಿಳಿಸಲು ತಯಾರು ಮಾಡುತ್ತಿದ್ದಾರೆ. ಅಂದರೆ, ಈ ಏಳೂ ಶಾಸಕರ ಕ್ಷೇತ್ರಗಳು ಜೆಡಿಎಸ್ ವರಿಷ್ಠರ ಹಿಟ್ ಲಿಸ್ಟ್ ನಲ್ಲಿ ಇರುವಂಥವು. ಚುನಾ ವಣೆಯ ಪೂರ್ವಸಿದ್ಧತೆ ವೇಳೆಯಲ್ಲಿಯೇ ಈ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನನೀಡಲು ನಿರ್ಧರಿಸಲಾಗಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇದ್ದುದರಿಂದ ಕಾಂಗ್ರೆಸ್ಸಿಗೆ ಅನುಕೂಲವಾಗಿತ್ತು. ಕಾಂಗ್ರೆಸ್ಸಿನ ವಿರೋಧಿ ಬಿಜೆಪಿ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ಗೂ ಬಿಜೆಪಿಯೇ ವಿರೋಧಿ ಎಂಬ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹೀಗಾಗಿ, ಬಿಜೆಪಿಯನ್ನು ಮಣಿಸುವ ಸಲುವಾಗಿ ಈ ಉಪಚುನಾವಣೆಯ ಫಲಿತಾಂಶದ ಆಧಾ ರದ ಮೇಲೆ ತೆರೆಮರೆಯಲ್ಲಿ ಅಂದರೆ, ಒಳ ಒಪ್ಪಂದದ ಮೂಲಕ ಸ್ನೇಹ ಮಾಡಿಕೊಳ್ಳು ವುದು ಸೂಕ್ತ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಒಂದು ವೇಳೆ ಇದೇ ಅನುಷ್ಠಾನಗೊಂಡಲ್ಲಿ ಬಂಡಾಯ ಶಾಸಕರಿಗೆ ತಕ್ಕ ಶಾಸ್ತಿ ಮಾಡಬೇಕು ಎಂಬ ಅಭಿಪ್ರಾಯ ಜೆಡಿಎಸ್ನಲ್ಲಿ ಮೂಡುತ್ತಿದೆ.
