ಬೆಂಗಳೂರು (ಜ. 08): ರಾಜಕೀಯ ಲೆಕ್ಕಾಚಾರದಲ್ಲಿ ದೇವೇಗೌಡರು ಎತ್ತಿದ ಕೈ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ಶುರುವಾಗಿದೆ ಕ್ಷೇತ್ರ, ಸೀಟು ಹಂಚಿಕೆ ಲೆಕ್ಕಾಚಾರ. ಈಗಾಗಲೇ ಮೈತ್ರಿ ಮಾಡಿ ಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುತ್ತಾ ಎಂಬ ಕುತೂಹಲ ಎದ್ದಿದೆ. 

ಯುಪಿ ಮಿತ್ರರಿಂದಲೇ ರಾಹುಲ್ ಗಾಂಧಿಗೆ ಗೇಟ್‌ಪಾಸ್!

9 ಸಿಕ್ಕರೂ ದೇವೇಗೌಡರಿಗೆ ಓಕೆ?

ದೇವೇಗೌಡರು ಮಾತುಕತೆಗಿಂತ ಮುಂಚೆಯೇ ಕಾಂಗ್ರೆಸ್‌ ಜೊತೆ ಮೈತ್ರಿ ಆಗಬೇಕಾದರೆ 11ರಿಂದ 12 ಸೀಟು ಕೊಡಬೇಕು ಎಂದು ಹೊರಗಡೆ ಹೇಳುತ್ತಿದ್ದರೂ, ಒಳಗೆ 9 ಕೊಟ್ಟರೂ ಸಾಕು ಎಂದು ಹೇಳುತ್ತಿದ್ದಾರಂತೆ. ಆದರೆ ಪೇಚಿನ ವಿಷಯ ಎಂದರೆ ಸೀಟಿನ ಸಂಖ್ಯೆ ಅಲ್ಲ, ಬದಲಾಗಿ ಕೇಳುತ್ತಿರುವ ಕ್ಷೇತ್ರಗಳು. ಈಗಿರುವ ಮಂಡ್ಯ, ಹಾಸನದ ಜೊತೆಗೆ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಉತ್ತರ ಕ್ಷೇತ್ರಗಳು ತಮಗೆ ಬೇಕೇ ಬೇಕು ಎನ್ನುತ್ತಿದ್ದಾರೆ ಗೌಡ.

ಕೆಲವೆಡೆ ಕಾಂಗ್ರೆಸ್‌ನ ಹಾಲಿ ಶಾಸಕರು ಇದ್ದರೂ ಕೂಡ ದೇವೇಗೌಡರು ವಿಧಾನಸಭಾ ಚುನಾವಣೆಯ ಕ್ಷೇತ್ರವಾರು ಫಲಿತಾಂಶ ತೋರಿಸುತ್ತಿದ್ದಾರೆ. ಇದನ್ನು ಏನಾದರೂ ರಾಹುಲ… ಗಾಂಧಿ ಅವರು ಮೈತ್ರಿಯ ಮುಲಾಜಿಗೆ ಬಿದ್ದು ಒಪ್ಪಿಕೊಂಡರೆ ರಾಜ್ಯ ಕಾಂಗ್ರೆಸ್‌ ನಾಯಕರದು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿಯಾಗಬಹುದು.

ನಾನೊಬ್ಬ ಮಿಸ್ಟೇಕನ್ ಐಡೆಂಟಿಟಿ: ನೋವು ಹೊರ ಹಾಕಿದ ಡಿಕೆಶಿ

ಮೊಯ್ಲಿಗೆ ಸೀಟು ಹಂಚಿಕೆ ಟೆನ್ಷನ್‌

6 ತಿಂಗಳಿನಿಂದ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಆಗುತ್ತದೆ, ನಾವು ಗೆಲ್ಲುವುದು ಸುಲಭ ಎನ್ನುತ್ತಿದ್ದ ಕಾಂಗ್ರೆಸ್‌ ಸಂಸದರು ಒಮ್ಮೆಗೇ ಟೆನ್ಷನ್‌ ಮಾಡಿಕೊಂಡು ಓಡಾಡುತ್ತಿದ್ದಾರೆ. ಕಳೆದ ವಾರ ತನ್ನ ಮನೆಯಲ್ಲಿ ರಾಜ್ಯದ ಕಾಂಗ್ರೆಸ್‌ ಸಂಸದರ ಸಭೆ ಕರೆದ ವೀರಪ್ಪ ಮೊಯ್ಲಿ, ಅಲ್ಲಿಗೆ ವೇಣುಗೋಪಾಲ…ರನ್ನೂ ಕರೆಸಿಕೊಂಡಿದ್ದರು. ‘ಯಾವುದೇ ಕಾರಣಕ್ಕೂ ಹಾಲಿ ಸಂಸದರು ಇರುವ ಸೀಟು ಬಿಟ್ಟುಕೊಡಬಾರದು, ಇಲ್ಲವಾದರೆ ಮೈತ್ರಿ ಬೇಡವೇ ಬೇಡ’ ಎಂದು ವೇಣು ಎದುರು ಮೊಯ್ಲಿ ಅಲವತ್ತುಕೊಂಡಿದ್ದಾರೆ.

ಆದರೆ ದೇವೇಗೌಡರು ಸೀಟ್‌ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಪುತ್ರನನ್ನು ಸಿದ್ದು, ವೇಣುಗೋಪಾಲ… ಬಳಿ ಮಾತುಕತೆಗೆ ಕಳಿಸಲು ತಯಾರಿಲ್ಲ. ಅಷ್ಟೇ ಅಲ್ಲ ಸೀಟ್‌ ಹಂಚಿಕೆ ಮಾತುಕತೆ ಏನಿದ್ದರೂ ಇಬ್ಬರು ರಾಷ್ಟ್ರೀಯ ಅಧ್ಯಕ್ಷರ ನಡುವೆ ಎಂದು ಹೇಳಿದ್ದಾರೆ. ಅಲ್ಲಿ ಏನಾಗುತ್ತೋ? ಗೌಡರು ರಾಹುಲ್‌ರನ್ನು ಒಪ್ಪಿಸಿಬಿಟ್ಟರೆ ಏನು ಕತೆ ಎಂಬ ಚಿಂತೆ ಕಾಂಗ್ರೆಸ್‌ ಸಂಸದರದು.

ದೊಡ್ಡ ನಗು, ತಲೆ ಮೇಲೆ ಕೈ

ಮೊಮ್ಮಗ ಪ್ರಜ್ವಲ್‌ಗೆ ಹಾಸನ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಹೇಳಿ ದಿಲ್ಲಿಗೆ ಬಂದಿದ್ದ ದೇವೇಗೌಡರನ್ನು ಸಂಸತ್ತಿನ ಸೆಂಟ್ರಲ… ಹಾಲ…ನಲ್ಲಿ ಮುತ್ತಿಕೊಂಡಿದ್ದು ರಾಜ್ಯದ ಬಿಜೆಪಿ ಸಂಸದರು. ಪ್ರತಾಪ್‌ ಸಿಂಹ ‘ಏನ್‌ ಸರ್‌ ಹಾಸನ ಬಿಟ್ಟು ಮೈಸೂರಿಗೆ ಬರ್ತೀರಿ ಅಂತ ಸುದ್ದಿ ಇದೆ. ನಮ್ಮ ಭವಿಷ್ಯ ಏನು’ ಎಂದು ದೊಡ್ಡ ಗೌಡರನ್ನು ಕೇಳಿದ್ದಾರೆ.

‘ಅಯ್ಯೋ ನಾನ್‌ ಯಾಕಪ್ಪ ಬರಲಿ. ನಿನ್ನ ಮತ್ತು ಸಿದ್ದು ನಡುವೆ ಬಂದು ನಾನೇನು ಮಾಡಲಿ. ಇಬ್ಬರು ದಿಗ್ಗಜರು ನೀವು’ ಎಂದು ಜೋರಾಗಿ ನಕ್ಕರಂತೆ. ಆಗ ಅಲ್ಲಿಗೆ ಬಂದ ಕೇಂದ್ರ ಸಚಿವ ಸದಾನಂದ ಗೌಡರು ನಗುತ್ತಾ ಕಿವಿಯಲ್ಲಿ, ‘ಬೆಂಗಳೂರು ಉತ್ತರಕ್ಕೆ ಬರ್ತೀರಿ ಅಂತ ಸುದ್ದಿ ಇದೆ’ ಎಂದು ಕೇಳಿದಾಗ ಹೌದು ಅನ್ನದ ಇಲ್ಲ ಕೂಡ ಎನ್ನದ ದೇವೇಗೌಡರು ಮತ್ತೆ ಜೋರಾಗಿ ನಕ್ಕರಂತೆ. ಅಷ್ಟರಲ್ಲಿ ಅಲ್ಲಿ ಕುಳಿತಿದ್ದ ಒಬ್ಬ ಉತ್ತರ ಕರ್ನಾಟಕದ ಸಂಸದರು ‘ನೀವು ಅವಿರೋಧವಾಗಿ ಆಯ್ಕೆ ಆಗಬೇಕು ಸರ್‌’ ಎಂದಾಗ ತಲೆಗೆ ಕೈಹಚ್ಚಿಕೊಂಡ ಗೌಡರು ಏನೂ ಮಾತನಾಡಲಿಲ್ಲವಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ