ಲಕ್ನೋ (ಜ. 08): ಉತ್ತರ ಪ್ರದೇಶದಲ್ಲಿ ಕೊನೆಗೂ ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ಮಾಯಾವತಿ ಅವರನ್ನು ಅಖಿಲೇಶ್‌ ಯಾದವ್‌ ಮನೆಗೇ ಹೋಗಿ ಭೇಟಿ ಮಾಡಿದ್ದು, ಎಸ್‌ಪಿ ಹಾಗೂ ಬಿಎಸ್‌ಪಿ ನಡುವೆ ಮೈತ್ರಿ ಏರ್ಪಡುವುದು ಪಕ್ಕಾ ಆಗಿದೆ. ಮಾಯಾವತಿ ಮತ್ತು ಅಖಿಲೇಶ್‌ ಯಾದವ್‌ ತಲಾ 37 ಸ್ಥಾನ ಹಂಚಿಕೊಳ್ಳಲು ನಿರ್ಧರಿಸಿದ್ದು, ಎರಡು ಸೀಟ್‌ ಅಜಿತ್‌ ಸಿಂಗ್‌ರಿಗೆ ಹಾಗೂ ಇನ್ನೆರಡು ಸೀಟುಗಳನ್ನು ಎರಡು ಸಣ್ಣ ಪಕ್ಷಗಳಿಗೆ ಹಂಚಲು ಮಾಯಾವತಿ ಒಪ್ಪಿದ್ದಾರೆ.

ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ಸನ್ನು ಮೈತ್ರಿಯಲ್ಲಿ ಬಿಟ್ಟುಕೊಳ್ಳಲು ಒಪ್ಪದ ಮಾಯಾವತಿ, ಬೇಕಿದ್ದಲ್ಲಿ ಅಮೇಠಿ ಮತ್ತು ರಾಯ್ಬರೇಲಿ ಎರಡು ಮಾತ್ರ ಬಿಟ್ಟು ಕೊಡೋಣ ಎಂದಿದ್ದಾರೆ. ಇವು ಸೋನಿಯಾ ಮತ್ತು ರಾಹುಲ್‌ ಗಾಂಧಿ ಕ್ಷೇತ್ರಗಳು. ಇನ್ನು ಎಸ್‌ಪಿಗೆ ಕಾಂಗ್ರೆಸ್‌ ಬೇಕೇ ಬೇಕು ಎಂದು ಇದ್ದಲ್ಲಿ ಎಸ್‌ಪಿ ಕೋಟಾದಿಂದ ಸೀಟ್‌ ಕೊಡಿ ಎಂದು ಮಾಯಾವತಿ ಅವರು ಅಖಿಲೇಶ್‌ಗೆ ಹೇಳಿದ್ದಾರೆ.

ಆದರೆ ಇದಕ್ಕೆ ಎಸ್‌ಪಿ ಕೂಡ ತಯಾರಿಲ್ಲ. ಹೀಗಾಗಿ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವಂಥ ಸ್ಥಿತಿಗೆ ಕಾಂಗ್ರೆಸ್‌ ಬಂದು ತಲುಪಿದ್ದು, ರಾಹುಲ… ಮತ್ತು ಸೋನಿಯಾ ಗಾಂಧಿ ಸ್ವತಃ ತಮ್ಮದೇ ಗೆಲುವಿಗಾಗಿ ಕೂಡ ಇಬ್ಬರು ಪ್ರಾದೇಶಿಕ ನಾಯಕರ ಎದುರು ನಿಲ್ಲುವ ಅಸಹಾಯಕತೆ ಸೃಷ್ಟಿಯಾಗಿದೆ.

ಯುಪಿಯಲ್ಲಿ ಯಾರಿಗೆ ಲಾಭ?

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬ್ರಾಹ್ಮಣ, ಬನಿಯಾ, ರಜಪೂತ ಮತಗಳನ್ನು ಒಡೆಯಬಹುದು. ಇದರಿಂದ ಬಿಜೆಪಿಗೆ ನಷ್ಟ, ನಮಗೆ ಲಾಭ ಎನ್ನುವುದು ಮಾಯಾವತಿ ಮತ್ತು ಅಖಿಲೇಶ್‌ ತಂತ್ರ. ಜೊತೆಗೆ ಮೈತ್ರಿಯಲ್ಲಿ ಕಾಂಗ್ರೆಸ್ಸನ್ನು ಮಜಬೂತ್‌ ಮಾಡುವುದು ಮಾಯಾವತಿಗೆ ಸುತರಾಂ ಇಷ್ಟವಿಲ್ಲ.

ಇನ್ನು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮುಸ್ಲಿಂ ಮತಗಳನ್ನು ಒಡೆಯಬಹುದು. ಇದರಿಂದ ಲಾಭ ಬಿಜೆಪಿಗೆ ಎನ್ನುವುದು ಅಮಿತ್‌ ಶಾ ಲೆಕ್ಕಾಚಾರ. ಆದರೆ ಕಾಂಗ್ರೆಸ್‌ಗಿರುವ ಚಿಂತೆ ಬೇರೆ. ಮಾಯಾವತಿ ಹಾಗೂ ಅಖಿಲೇಶ್‌ ಮೈತ್ರಿಯಿಂದ ಹೊರಗಿದ್ದಲ್ಲಿ ಒಟ್ಟು ಸ್ಥಾನ ಗಳಿಕೆಯಲ್ಲಿ ಹಿಂದೆ ಬೀಳುವುದರ ಜೊತೆಗೆ ಇಡೀ ದೇಶದಲ್ಲಿ ರಾಹುಲ… ಮೈತ್ರಿಯ ನಾಯಕತ್ವ ವಹಿಸುವುದರಿಂದ ವಂಚಿತರಾಗುತ್ತಾರೆ ಎನ್ನುವ ಆತಂಕ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

.