‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!
ಆನಂದ್ ಸಿಂಗ್ ರಾಜೀನಾಮೆಯಿಂದ ಅಮೇರಿಕಾದಲ್ಲಿ ಸಿಎಂಗೆ ಶುರುವಾಗಿದೆ ಟೆನ್ಷನ್ | ಅಮೇರಿಕಾದಿಂದ ಕೂಡಲೇ ಹೊರಡಬೇಡ ಅಂದ್ರಂತೆ ದೇವೇಗೌಡ್ರು
ಬೆಳಿಗ್ಗೆ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್‌ನ ಘಟಾನುಘಟಿಗಳೆಲ್ಲಾ ಮೊದಲು ಫೋನ್ ಮಾಡಿದ್ದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಗೆ. ನಂತರ ದೇವೇಗೌಡರಿಗೆ.
‘ಏನು ಮಾಡಬೇಕು, ದೊಡ್ಡವರೇ ಒಬ್ಬೊಬ್ಬರಾಗಿ ರಾಜೀನಾಮೆ ಕೊಡುತ್ತಾರಂತೆ’ ದೇವೇಗೌಡರಿಗೆ ಹೇಳಿದಾಗ ಅವರು ‘ಕೊಡಲಿ ಬಿಡಿ, ನಮಗೇನು. ಇದನ್ನೆಲ್ಲಾ ಆಡಿಸುವ ಕೈ ನಿಮ್ಮ ಪಕ್ಷದಲ್ಲೇ ಇದೆ. ಅವರಿಗೆ ಹೋಗಿ ಹೇಳಿ, ಇವೆಲ್ಲ ನಾನು ನೋಡಿದ ಆಟಗಳೇ. ಹೋಗ್ಲಿ ಬಿಡಿ, ನಾನು ಎಸ್‌ಸಿ ಎಸ್‌ಟಿ ಸಮಾವೇಶದಲ್ಲಿ ಬ್ಯುಸಿ ಇದ್ದೇನೆ’ ಎಂದು ಫೋನ್ ಕಟ್ ಮಾಡಿದರಂತೆ. ‘ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೆ ದಿಲ್ಲಿಯಿಂದ ನಾಯಕರು ಬರಬೇಕು, ಬೆಂಕಿ ನಂದಿಸಬೇಕು. ಎಲ್ಲ ನಾವೇ ಮಾಡಬೇಕೆಂದರೆ ಹೇಗೆ?’ ಎಂದು ಇನ್ನೊಬ್ಬ ಕಾಂಗ್ರೆಸ್ ನಾಯಕರು ಗರಂ ಆಗಿ ಹೇಳಿದರಂತೆ.
ಕುಮಾರಸ್ವಾಮಿ ಬರೋದು ಬೇಡ ಅಂದಿದ್ಯಾರು?
ಬೆಳಿಗ್ಗೆ ಶಾಸಕರ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆಯೇ ಟೆನ್ಶನ್ ಆದ ನ್ಯೂಜೆರ್ಸಿಯಲ್ಲಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರಿಗೆ ತಾವೇ ಫೋನಾಯಿಸಲು ಶುರು ಮಾಡಿದ್ದಾರೆ. ಆದರೆ ಕೂಡಲೇ ಅಮೆರಿಕದಿಂದ ಭಾರತಕ್ಕೆ ಹೊರಡಬೇಕೋ ಅಥವಾ ಬೇಡವೋ ಎಂಬ ದ್ವಂದ್ವದಲ್ಲಿದ್ದರಂತೆ.
ತಕ್ಷಣ ತಂದೆಗೆ ಫೋನಾಯಿಸಿದಾಗ ದೊಡ್ಡ ಗೌಡರು, ‘ನೀನು ಅಲ್ಲೆಲ್ಲ ಕಾರ್ಯಕ್ರಮ ಮುಗಿಸಿ ಬಾ. ಬೇಗನೆ ಬಂದರೆ ಸರ್ಕಾರ ಬಿದ್ದೇ ಹೋಯಿತೇನೋ ಎಂದು ಮಾಧ್ಯಮಗಳು ಸೀನ್ ಸೃಷ್ಟಿಮಾಡುತ್ತವೆ. ಬೇಕೆಂದರೆ ಅಲ್ಲಿಂದಲೇ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ಗೆ ಫೋನಾಯಿಸಿ ವಿವರ ಕೊಡುತ್ತಿರು’ ಎಂದರಂತೆ. ಕೆಲವೊಮ್ಮೆ ದೇವೇಗೌಡರ ಮನಸ್ಸು ಅರಿಯೋದು ತುಂಬಾ ಕಷ್ಟ. ಸಾಂದರ್ಭಿಕ ಶಿಶು ಹೋದರೆ ಹೋಗಲಿ, ಹೊಸ ವಿಕಲ್ಪಗಳ ಬಗ್ಗೆ ಕೂಡ ಅವರು ಯೋಚನೆ ಮಾಡುತ್ತಿರಬೇಕು ಅನ್ನಿಸುತ್ತದೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ಧಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ