ಬೆಂಗಳೂರು (ಜ. 27):  ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿರುವ ಜೆಡಿಎಸ್‌, ಪಕ್ಷದ ಸಂಘಟನೆ ಕುರಿತು ಭಾನುವಾರ ಸಭೆ ನಡೆಯಲಿದ್ದು, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಬೆಂಗಳೂರಿನ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸ್ಪರ್ಧಿಸುವ ಬಗ್ಗೆ ಚರ್ಚೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಭೆಯು ಮಹತ್ವ ಪಡೆದುಕೊಂಡಿದೆ. ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸಭೆ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಭಾಗವಹಿಸಲಿದ್ದಾರೆ. ಪಕ್ಷದ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್‌.ಪ್ರಕಾಶ್‌ ಹಾಗೂ ವಿವಿಧ ಘಟಕಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.

ಚುನಾವಣೆಗೆ ಪಕ್ಷವನ್ನು ಸಂಘಟಿಸಿ ಬಲಗೊಳಿಸುವ ಬಗ್ಗೆ ದೇವೇಗೌಡ ಅವರು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಕಾಂಗ್ರೆಸ್‌ ಜತೆ ಸರ್ಕಾರ ನಡೆಸುತ್ತಿರುವ ಕಾರಣ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ಕಾಂಗ್ರೆಸ್‌ನೊಂದಿಗೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದಂತೆ ಕಾರ್ಯಕರ್ತರು ಕಾರ್ಯ ನಿರ್ವಹಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಲಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಿಂದ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ದೇವೇಗೌಡ ಅವರು ಕಣಕ್ಕಿಳಿವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಬೆಂಗಳೂರು ನಾಯಕರ ಅಭಿಪ್ರಾಯಗಳನ್ನು ಪಡೆದುಕೊಂಡು ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.