ಬೆಂಗಳೂರು(ಸೆ. 15): ಬಿಬಿಎಂಪಿ ಮೇಯರ್ ಸ್ಥಾನ ಕೊಟ್ಟವರೊಂದಿಗೆ ನಮ್ಮ ದೋಸ್ತಿ ಎಂದು ಜೆಡಿಎಸ್ ಹೊಸ ಬಾಂಬ್ ಸಿಡಿಸಿದೆ. ಪಾಲಿಕೆಯಲ್ಲಿ ಸದ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಈ ಹೇಳಿಕೆಯದ್ದೇ ಸದ್ದು. ಮೇಯರ್ ಸ್ಥಾನ ಕೊಡಲು ಒಪ್ಪಿದವರಿಗೆ ಮಾತ್ರ ನಾವು ಬೆಂಬಲ ಕೊಡುವುದಾಗಿ ದಾಳ ಹೂಡಿದ್ದಾರೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಿದ್ದೆಕೆಡಿಸಿದೆ.
ಇಡೀ ಬೆಂಗಳೂರಿನಲ್ಲಿ ಜೆಡಿಎಸ್ ಗೆದ್ದಿರುವುದು 14 ವಾರ್ಡ್'ಗಳಲ್ಲಿ ಮಾತ್ರ.. ಇತ್ತ ಕಾಂಗ್ರೆಸ್ 76 ವಾರ್ಡ್ಗಳಲ್ಲಿ ಜಯಿಸಿದೆ. ಬಿಜೆಪಿಯಂತೂ 100 ವಾರ್ಡ್'ಗಳಲ್ಲಿ ಜಯಭೇರಿ ಭಾರಿಸಿದೆ.. ಹೀಗಿರುವಾಗ, ಬೆರಳೆಣಿಕೆಯಷ್ಟು ವಾರ್ಡ್'ಗಳಲ್ಲಿ ಗೆದ್ದವರಿಗೆ ಮೇಯರ್ ಸ್ಥಾನವನ್ನ ಬಿಟ್ಟು ಕೊಡೊದು ಹೇಗೆ ಎಂದು ಗುಸುಗುಸು ಪಿಸುಪಿಸು ಚರ್ಚೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಶುರುವಾಗಿದೆ.
ಮಾತನಾಡಲಿ ಎಂದ ಅಶೋಕ್:
ಮಾಧ್ಯಮದಲ್ಲಿ ಮಾತ್ರ ಜೆಡಿಎಸ್ ತನ್ನ ಬೇಡಿಕೆಯನ್ನು ಪ್ರಸ್ತಾಪಿಸಿದೆ. ಬಿಜೆಪಿ ಅಂಗಳಕ್ಕೆ ಜೆಡಿಎಸ್ ತನ್ನ ಬೇಡಿಕೆಯ ಚೆಂಡನ್ನ ಎಸೆದಿಲ್ಲ..ಹಾಗಾಗಿ ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದಿದ್ದಾರೆ ಬಿಜೆಪಿ ಮುಖಂಡ ಆರ್.ಆಶೋಕ್..
ಕಾಂಗ್ರೆಸ್ ಪರ್ಯಾಯ ಆಫರ್:
ಇತ್ತ ಕಾಂಗ್ರೆಸ್ ವಲಯದಲ್ಲಿ ಜೆಡಿಎಸ್'ನ ಮೇಯರ್ ಬೇಡಿಕೆಯನ್ನು ಈಡೇರಿಸುವುದು ಕಷ್ಟ ಎಂಬ ಮಾತು ಕೇಳಿಬರುತ್ತಿದೆ. ಆದ್ರೆ, ಉಪಮೇಯುರ್ ಸ್ಥಾನ , 4 ಸ್ಥಾಯಿ ಸಮಿತಿಗಳನ್ನ ನೀಡಿ ಜೆಡಿಎಸ್ ಬೆಂಬಲ ಪಡೆಯುವ ಯೋಜನೆ ಕೈಪಾಳಯದ ತಲೆಯಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.
ಬಿಬಿಎಂಪಿಯಲ್ಲಿ ಅಧಿಕಾರದ ಗದ್ದುಗೆ ಏರಲು ಜೆಡಿಎಸ್ ಬೆಂಬಲ ಬೇಕೆ ಬೇಕು.. ಜೆಡಿಎಸ್ ಕಿಂಗ್ ಮೇಕರ್ ಎಂಬುದರಲ್ಲಿ ಅನುಮಾನವೇ ಇಲ್ಲ. 269 ಮತಗಳಲ್ಲಿ 135 ಮ್ಯಾಜಿಕ್ ನಂಬರ್ ಗೆಲ್ಲಬೇಕಾದ್ರೆ ಜೆಡಿಎಸ್ ಅಸ್ತು ಸಿಗಲೇ ಬೇಕು. ಹೀಗಾಗಿ ಜೆಡಿಎಸ್ ತನಗಿರುವ ಬೇಡಿಕೆಯನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿದೆ.
ವರದಿ: ನಂದಿನಿ ಜೆ., ಸುವರ್ಣ ನ್ಯೂಸ್
