ಬಿಜೆಪಿ ಹೆಚ್ಚುವರಿ ಮತಗಳಿಗೆ ಜೆಡಿಎಸ್‌ ಗಾಳ

news | Saturday, March 17th, 2018
Suvarna Web Desk
Highlights

ರಾಜ್ಯಸಭಾ ಚುನಾವಣೆ ಗೆಲುವಿಗೆ ಭರ್ಜರಿ ರಾಜಕೀಯ ತಂತ್ರಗಾರಿಕೆ ಹೆಣೆದಿರುವ ಜೆಡಿಎಸ್‌, ಇದೀಗ ಬಿಜೆಪಿ ಬುಟ್ಟಿಯಲ್ಲಿರುವ ಹೆಚ್ಚುವರಿ ಮತಗಳು ಹಾಗೂ ಪಕ್ಷೇತರರಿಗೆ ಗಾಳ ಹಾಕಿದೆ.

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು : ರಾಜ್ಯಸಭಾ ಚುನಾವಣೆ ಗೆಲುವಿಗೆ ಭರ್ಜರಿ ರಾಜಕೀಯ ತಂತ್ರಗಾರಿಕೆ ಹೆಣೆದಿರುವ ಜೆಡಿಎಸ್‌, ಇದೀಗ ಬಿಜೆಪಿ ಬುಟ್ಟಿಯಲ್ಲಿರುವ ಹೆಚ್ಚುವರಿ ಮತಗಳು ಹಾಗೂ ಪಕ್ಷೇತರರಿಗೆ ಗಾಳ ಹಾಕಿದೆ.

ಈ ಚುನಾವಣೆಗೆ ಮೂಲಕ ತಮ್ಮ ರಾಜಕೀಯ ವೈರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲು ಜೆಡಿಎಸ್‌ ತಂತ್ರಕ್ಕೆ ಬಿಜೆಪಿ ಸಹ ಸಾಥ್‌ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದೆ.

ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಹುರಿಯಾಳುಗಳ ನೇರಾನೇರ ಸ್ಪರ್ಧೆ ಉಂಟಾಗಿದೆ. ಆದರೆ ವಾಸ್ತವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಪರಮೋಚ್ಚ ನಾಯಕ ಎಚ್‌.ಡಿ.ದೇವೇಗೌಡ ಕುಟುಂಬದ ನಡುವೆ ಕಾಳಗ ಏರ್ಪಟ್ಟಿದೆ. ಜೆಡಿಎಸ್‌ನ ‘ಖಜಾನೆ’ ಎಂದೇ ಹೇಳಲಾಗುತ್ತಿರುವ ಫಾರೂಕ್‌ ಅವರನ್ನು ಸೋಲಿಸುವ ಮೂಲಕ ದೇವೇಗೌಡ ಕುಟುಂಬಕ್ಕೆ ರಾಜಕೀಯವಾಗಿ ಪೆಟ್ಟು ನೀಡಲು ಮುಖ್ಯಮಂತ್ರಿ ತಂತ್ರಗಾರಿಕೆ ಹೆಣೆದಿದ್ದರೆ, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಯ ವಿರೋಧಿಗಳನ್ನು ಕ್ರೋಡೀಕರಿಸಿ ಸೇಡು ತೀರಿಸಿಕೊಳ್ಳಲು ದೇವೇಗೌಡ ಅವರು ದಾಳ ಉರುಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯ ಹೆಚ್ಚುವರಿ ಮತ ಮತ್ತು ಪಕ್ಷೇತರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಪಕ್ಷದ ಮುಖಂಡ ಎಚ್‌.ಡಿ.ರೇವಣ್ಣ ನೇತೃತ್ವದಲ್ಲಿ ಮತಬೇಟೆ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದ್ದು, ಈ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡುವ ರಾಜಕೀಯ ತಂತ್ರ ರೂಪಿಸಲಾಗುತ್ತಿದೆ. ಜೆಡಿಎಸ್‌ ಪಕ್ಷದ ಅಭ್ಯರ್ಥಿ ಬಿ.ಎಂ. ಫಾರೂಕ್‌ ಜಯ ಗಳಿಸಲು ಸಂಖ್ಯಾಬಲದ ಕೊರತೆ ಇದೆ. ಆದರೂ, ಗೆಲುವಿನ ರಣತಂತ್ರ ರೂಪಿಸುವಲ್ಲಿ ಪಕ್ಷವು ತೊಡಗಿದೆ. ಬಿಜೆಪಿಯ ಹೆಚ್ಚುವರಿ ಮತ ಮತ್ತು ಪಕ್ಷೇತರ ಮತಗಳನ್ನು ಸೆಳೆಯಲು ಕುದುರೆ ವ್ಯಾಪಾರ ಆರಂಭಗೊಂಡಿದೆ ಎಂದು ಹೇಳಲಾಗಿದೆ.

ಸಂಖ್ಯಾ ಲೆಕ್ಕಾಚಾರ:

ಜೆಡಿಎಸ್‌ನ 40 ಶಾಸಕರ ಪೈಕಿ ಚಿಕ್ಕಮಾದು ನಿಧನರಾಗಿದ್ದು, ಮಾನಪ್ಪ ವಜ್ಜಲ್‌, ಶಿವರಾಜ್‌ ಪಾಟೀಲ್‌ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್‌ ಸಂಖ್ಯಾಬಲ 37 ಇದ್ದು, ಇದರಲ್ಲಿ ಏಳು ಶಾಸಕರು ಬಂಡಾಯಗಾರರಾಗಿ ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್‌ನ ಮತಗಳು 30ಕ್ಕೆ ಇಳಿದಿದ್ದು, ಪಕ್ಷದ ಅಭ್ಯರ್ಥಿಗೆ ಈ ಮತಗಳು ಖಚಿತವಾಗಿ ಲಭಿಸಲಿವೆ. ಆದರೆ, ಗೆಲುವಿಗೆ 44 ಮತಗಳು ಬೇಕಾಗಿದ್ದು, ಕೊರತೆ ಇರುವ 14 ಮತಗಳನ್ನು ಸೆಳೆಯಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ ಎನ್ನಲಾಗಿದೆ.

ಬಿಜೆಪಿಗೆ 40 ಮತಗಳಿದ್ದು, ಬಿಎಸ್‌ಆರ್‌ ಕಾಂಗ್ರೆಸ್‌ನ 3, ಕೆಜೆಪಿಯ 4 ಮತ್ತು ಸಮಾಜವಾದಿ ಪಕ್ಷದಿಂದ ಶಾಸಕರಾಗಿರುವ ಸಿ.ಪಿ.ಯೋಗೀಶ್ವರ್‌ ಮತಗಳು ಸೇರಿದಂತೆ ಒಟ್ಟು 48 ಮತಗಳು ಬಿಜೆಪಿಯಲ್ಲಿವೆ. ಬಿಜೆಪಿ ಅಭ್ಯರ್ಥಿ ಸಂಸದ ರಾಜೀವ್‌ ಚಂದ್ರಶೇಖರ್‌ ಗೆಲುವಿಗೆ 44 ಮತಗಳು ಮಾತ್ರ ಸಾಕಾಗಲಿವೆ. ಇನ್ನು 4 ಮತಗಳು ಹೆಚ್ಚುವರಿಯಾಗಿ ಉಳಿದುಕೊಳ್ಳಲಿವೆ. ಅಂತೆಯೇ ಪಕ್ಷೇತರ ಅಭ್ಯರ್ಥಿ 9 ಮಂದಿ ಇದ್ದಾರೆ. ಈ ಪೈಕಿ ಪಕ್ಷೇತರ ಶಾಸಕರಾದ ಖಾನಾಪುರದ ಅರವಿಂದ ಚಂದ್ರಕಾಂತ್‌ ಪಾಟೀಲ್‌, ಕೋಲಾರದ ವರ್ತೂರು ಪ್ರಕಾಶ್‌, ಬೆಳಗಾವಿ ದಕ್ಷಿಣದ ಸಂಭಾಜಿ ಲಕ್ಷ್ಮಣ್‌ ಪಾಟೀಲ್‌ ಅವರನ್ನು ಸೆಳೆಯಲು ಜೆಡಿಎಸ್‌ ಕಸರತ್ತು ನಡೆಸುತ್ತಿದೆ.

ಇನ್ನುಳಿದ ಪಕ್ಷೇತರ ಅಭ್ಯರ್ಥಿಗಳಾದ ಭಟ್ಕಳದ ಮಂಕಾಳ ವೈದ್ಯ, ಕಾರವಾರದ ಸತೀಶ್‌ ಸೈಲ್‌, ಕೂಡ್ಲಿಗಿ ನಾಗೇಂದ್ರ, ಮುಳಬಾಗಿಲಿನ ಜಿ. ಮಂಜುನಾಥ್‌ ಮತ್ತು ಬಾಗೇಪಲ್ಲಿಯ ಸುಬ್ಬಾರೆಡ್ಡಿ ಈಗಾಗಲೇ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದಾರೆ. ಇನ್ನು, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾಗಿದೆ. ಬಿಜೆಪಿಯ ಹೆಚ್ಚುವರಿ ಮತ್ತು ಪಕ್ಷೇತರರ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್‌ ಯಶಸ್ವಿಯಾದರೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ನಡುವೆ, ಜೆಡಿಎಸ್‌ನ ಬಂಡಾಯ ಶಾಸಕರು ಪಕ್ಷದಲ್ಲಿದ್ದರೂ ಕಾಂಗ್ರೆಸ್‌ಗೆ ಮತ ಚಲಾಯಿಸುವುದು ಬಹುತೇಕ ಖಚಿತ. ಹೀಗಾಗಿ ಅವರನ್ನು ಕಾನೂನಿನ ಮೂಲಕ ಕೈ ಕಟ್ಟಿಹಾಕುವ ಪ್ರಯತ್ನಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಿರ್ಧರಿಸಿದ್ದಾರೆ.

ಕಳೆದ 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಎನ್‌.ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್‌ ಅಹ್ಮದ್‌ ಖಾನ್‌, ಎಚ್‌.ಸಿ.ಬಾಲಕೃಷ್ಣ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಇಕ್ಬಾಲ್‌ ಅನ್ಸಾರಿ, ಭೀಮಾನಾಯ್ಕ ಮತ್ತು ಗೋಪಾಲಯ್ಯ ಅವರು ಅಡ್ಡಮತದಾನ ಮಾಡಿದ್ದರು. ಆದರೆ, ನಂತರ ಪಕ್ಷದ ವರಿಷ್ಠರಲ್ಲಿ ಗೋಪಾಲಯ್ಯ ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದರು. ಬಳಿಕ ಏಳು ಬಂಡಾಯ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಆದರೆ, ವರ್ಷದಿಂದ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಾನೂನು ಹೋರಾಟಕ್ಕೆ ಜೆಡಿಎಸ್‌ ಸಜ್ಜಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk