ಗದಗ, (ಜೂನ್.10): ಅಸಮಾಧಾವನ್ನು ಶಮನಗೊಳಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 12ರಂದು ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಿದ್ದಾರೆ.

ಇದರ ಮಧ್ಯೆ ಹಿರಿಯ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು ಪರೋಕ್ಷವಾಗಿ ತಮ್ಮ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.

‘ದೇವೇಗೌಡ್ರು ಗಮನಿಸಲಿ’ ಹೊರಟ್ಟಿ ಮಾತಿಗೆ ಕಾಂಗ್ರೆಸ್ ಕಿಡಿ

ಈ ಬಗ್ಗೆ ಗದಗನಲ್ಲಿಂದು ಮಾತನಾಡಿದ ಹೊರಟ್ಟಿ, ಶಾಸಕರಾದವರು ಎಲ್ಲರೂ ಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ.  ಹೀಗಾಗಿ ನನ್ನಂತವರು ಮಂತ್ರಿ ಆಗುವ ಕಾಲ ಇದಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನಾನು ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡಿದವನು. ಈ ಹಿಂದೆ ಶಾಸಕರನ್ನು ಕರೆದು ಮಂತ್ರಿ ಮಾಡುತ್ತಿದ್ದರು. ಈಗ ಯಾರನ್ನು ಮಂತ್ರಿ ಮಾಡಬೇಕು ಎನ್ನುವುದು ಮುಖಂಡರಿಗೆ ತಿಳಿಯದಂತಾಗಿದೆ ಎಂದರು.

ಶಾಸಕರಾದವರು ಮಂತ್ರಿಯಾಗಿ ಕೆಲಸ ಮಾಡಬೇಕು ಎಂದು ಆಸೆ ಪಡುವುದು ತಪ್ಪು.  ಜನ ಅಧಿಕಾರ ಕೊಟ್ಟಿದ್ದು,  ಶಾಸಕರಾಗಿ ಸರ್ಕಾರದ ಕೆಲಸವನ್ನು ಮಾಡಿ ಗೌರವ ತರಬೇಕೆಂದು ಹೇಳಿದರು.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಬಸವರಾಜ್ ಹೊರಟ್ಟಿ ಅವರು ಈ ಮಾತುಗಳನ್ನು ಗಮನಿಸಿದರೆ, ನಿಷ್ಠಾವಂತರಿಗೆ ಇದು ಕಾಲವಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. .

ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋದು ಒಳ್ಳೆಯದು ಎಂದು  ಇತ್ತೀಚೆಗಷ್ಟೇ ಹೊರಟ್ಟಿ ಹೇಳಿಕೆ ನೀಡಿದ್ದರು. ಇವೆಲ್ಲವುಗಳನ್ನು ಗಮನಿಸಿದರೆ ಮೈತ್ರಿ ಮಾಡಿಕೊಂಡಿರುವುದು ಹೊರಟ್ಟಿ ಅವರಿಗೆ ಇಷ್ಟವಿಲ್ಲ ಎನ್ನುವುದು ತೋರಿಸುತ್ತಿದೆ.