ಬೆಂಗಳೂರು[ಜು.07]: ತಮ್ಮ ಪಕ್ಷದ ಯಾವುದೇ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಎಚ್‌.ವಿಶ್ವನಾಥ್‌, ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರು ರಾಜೀನಾಮೆ ನೀಡಿರುವುದು ಬಹುದೊಡ್ಡ ಶಾಕ್‌ ಆಗಿದೆ.

ವಿಶೇಷವಾಗಿ ಶಾಸಕ ಎಚ್‌.ವಿಶ್ವನಾಥ್‌ ಮತ್ತು ನಾರಾಯಣಗೌಡ ರಾಜೀನಾಮೆಗಿಂತ ಶಾಸಕ ಗೋಪಾಲಯ್ಯ ರಾಜೀನಾಮೆ ನೀಡಿರುವುದು ಆಘಾತ ಉಂಟುಮಾಡಿದೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಗೋಪಾಲಯ್ಯ ಜೆಡಿಎಸ್‌ ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿ ಪಕ್ಷದ ವರಿಷ್ಠರ ವಿರುದ್ಧ ಸಮರ ಸಾರಿದ್ದರು. ತರುವಾಯ ವರಿಷ್ಠರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಮರಳಿ ನಿಷ್ಠೆಯಿಂದ ಇದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್‌-ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಗೋಪಾಲಯ್ಯ ಅವರ ಪತ್ನಿ ಹಾಗೂ ಬೆಂಗಳೂರಿನ ವೃಷಭಾವತಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಹೇಮಲತಾ ಅವರಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ಥಾನವನ್ನೂ ನೀಡಲಾಗಿದ್ದು, ಬಿಬಿಎಂಪಿ ಬಜೆಟ್‌ ಮಂಡಿಸಿದ್ದರು.

ನಂತರದ ದಿನಗಳಲ್ಲಿ ಗೋಪಾಲಯ್ಯ ಅವರು ಪಕ್ಷದ ಚಟುವಟಿಕೆಯಲ್ಲಿ ಸಾಕಷ್ಟುಪಾಲ್ಗೊಳ್ಳುತ್ತಿದ್ದರು. ಆದರೂ ಏಕಾಏಕಿ ಅತೃಪ್ತರ ಗುಂಪಿನಲ್ಲಿ ಗೋಪಾಲಯ್ಯ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಇನ್ನು ಎಚ್‌.ವಿಶ್ವನಾಥ್‌ ಅವರು ಸಮನ್ವಯ ಸಮಿತಿಯಲ್ಲಿ ಪಕ್ಷದ ಅಧ್ಯಕ್ಷರಿಗೆ ಸ್ಥಾನ ನೀಡಬೇಕು ಎಂದು ಹಲವು ಬಾರಿ ಹೇಳಿದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಾಗಲಿ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಾಗಲಿ ಈ ನಿಟ್ಟಿನಲ್ಲಿ ಪ್ರಯತ್ನವನ್ನೂ ಸಹ ಮಾಡಲಿಲ್ಲ. ಇದು ವಿಶ್ವನಾಥ್‌ ಅಸಮಾಧಾನಕ್ಕೆ ಕಾರಣವಾಗಿತ್ತು. ಪಕ್ಷದ ಪ್ರಮುಖ ನಿರ್ಧಾರಗಳನ್ನು ವಿಶ್ವನಾಥ್‌ ಅವರ ಗಮನಕ್ಕೆ ತಾರದೇ ತೆಗೆದುಕೊಳ್ಳಲಾಗುತ್ತಿತ್ತು. ಪಕ್ಷದ ರಾಜ್ಯಾಧ್ಯಕ್ಷರಾದ ತಮ್ಮ ಅನುಭವವನ್ನು ಮುಖ್ಯಮಂತ್ರಿಗಳು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇಷ್ಟಾಗಿಯೂ ವಿಶ್ವನಾಥ್‌ ಅವರಿಗೆ ರಾಜಕೀಯ ಮರುಹುಟ್ಟು ನೀಡಿರುವುದರಿಂದ ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವನ್ನು ದೇವೇಗೌಡರು ಹೊಂದಿದ್ದರು.

ಇನ್ನು ಶಾಸಕ ನಾರಾಯಣಗೌಡ ಬಿಜೆಪಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಹಾಗಾಗಿ ಯಾವತ್ತಾದರೂ ಪಕ್ಷ ತೊರೆಯಬಹುದು ಎಂಬ ಸಂಶಯ ಪಕ್ಷದ ವರಿಷ್ಠರಲ್ಲಿ ಇತ್ತು. ಆದರೆ ಈ ಮೂವರು ಶಾಸಕರು ಕಾಂಗ್ರೆಸ್‌ ಶಾಸಕರ ಜೊತೆ ಸೇರಿಕೊಂಡು ರಾಜೀನಾಮೆ ನೀಡಿರುವುದನ್ನು ಊಹಿಸಿರಲಿಲ್ಲ.