Asianet Suvarna News Asianet Suvarna News

ಜೆಡಿಎಸ್ ಸಚಿವರ ಪಟ್ಟಿ ಬಹುತೇಕ ಸಿದ್ಧ : ಯಾರಿಗೆ ಮಂತ್ರಿಗಿರಿ..?

ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚೆ, ಸಮಾಲೋಚನೆ ಮುಂದುವರೆದ ಬೆನ್ನಲ್ಲೇ ಜೆಡಿಎಸ್‌ನಿಂದ ಯಾರು ಸಚಿವರಾಗಬಹುದು ಎಂಬುದರ ಪಟ್ಟಿ ಬಹುತೇಕ ಸಿದ್ಧಗೊಂಡಿದೆ.

JDS Minister List Almost Finalised

ಬೆಂಗಳೂರು :  ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚೆ, ಸಮಾಲೋಚನೆ ಮುಂದುವರೆದ ಬೆನ್ನಲ್ಲೇ ಜೆಡಿಎಸ್‌ನಿಂದ ಯಾರು ಸಚಿವರಾಗಬಹುದು ಎಂಬುದರ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. 

ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೊರತು ಪಡಿಸಿ ಜೆಡಿಎಸ್ ಪಾಲಿಗೆ 11 ಸಚಿವ ಸ್ಥಾನಗಳು ಲಭಿಸಲಿವೆ. ಇರುವ 37 ಮತ್ತು ಬಿಎಸ್‌ಪಿಯ ಒಬ್ಬ ಶಾಸಕರ ನಡುವೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಬೇಕಾಗಿದೆ. ಹನ್ನೊಂದರ ಪೈಕಿ ಎರಡು ಸ್ಥಾನ ಕುರುಬ ಸಮುದಾಯಕ್ಕೆ, ಎರಡು ಸ್ಥಾನ ಲಿಂಗಾಯತ ಸಮುದಾಯಕ್ಕೆ, ಎರಡು ಸ್ಥಾನ ದಲಿತ ಸಮುದಾಯಕ್ಕೆ, 3 ಅಥವಾ ನಾಲ್ಕು ಸ್ಥಾನ ಒಕ್ಕಲಿಗರಿಗೆ ಹಾಗೂ ಒಂದು ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ.

ಇತರೆ ಸಮುದಾಯಗಳಿಗೆ ಹೋಲಿಸಿದರೆ ಜೆಡಿಎಸ್‌ನಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಹಂಚಿಕೆ ಮಾಡುವುದೇ ಪ್ರಯಾಸವಾಗಿ ಪರಿಣಮಿಸಿದೆ. ಹಳೆ ಮೈಸೂರು ಭಾಗದಲ್ಲೇ ಜೆಡಿಎಸ್ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದರಿಂದ ಸಹಜವಾಗಿಯೇ ಒಕ್ಕಲಿಗರ ಸಂಖ್ಯೆ ದೊಡ್ಡದಿದೆ. 

ಜತೆಗೆ ಪ್ರಭಾವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಸನ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಎಚ್.ಡಿ.ರೇವಣ್ಣ ಅವರಿಗೆ ಒಂದು ಸ್ಥಾನ ಪಕ್ಕಾ. ಇನ್ನುಳಿದಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ ಹೆಗ್ಗಳಿಕೆ ಹೊಂದಿರುವ ಜಿ.ಟಿ.ದೇವೇಗೌಡ, ಮಂಡ್ಯದಲ್ಲಿ ಹಿಡಿತ ಮುಂದುವರೆಸಲು ಸಿ.ಎಸ್.ಪುಟ್ಟರಾಜು ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ತುಮಕೂರಿನಿಂದ ಸತ್ಯನಾರಾಯಣ ಮತ್ತು ಶ್ರೀನಿವಾಸ್ ಅವರಿಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ದರೂ ಒಕ್ಕಲಿಗ ಸಮುದಾಯದ ಕುಂಚಿಟಿಗ ಉಪಜಾತಿಗೆ ಸೇರಿದ ಸತ್ಯನಾರಾಯಣ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಕುರುಬ ಸಮುದಾಯಕ್ಕೆ ಸೇರಿದ ಎಚ್. ವಿಶ್ವನಾಥ್ ಹಾಗೂ ಬಂಡೆಪ್ಪ ಕಾಶೆಂಪೂರ್ ಅವರಿಬ್ಬರಿಗೂ ಸಚಿವ ಸ್ಥಾನ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಇತರ ಹಿಂದುಳಿದ ವರ್ಗಗಳ ಕೋಟಾದಲ್ಲಿ ಇತರ ಸಮುದಾಯಗಳ ಹೆಚ್ಚಿನ ಶಾಸಕರು ಆಯ್ಕೆಯಾಗಿಲ್ಲದ ಕಾರಣ ಕುರುಬ ಸಮುದಾಯಕ್ಕೇ ಪ್ರಾಶಸ್ತ್ಯ ನೀಡಲು ಉದ್ದೇಶಿಸಲಾಗಿದೆ. ಮೇಲಾಗಿ ಬಂಡೆಪ್ಪ ಮತ್ತು ವಿಶ್ವನಾಥ್ ಅವರಿಬ್ಬರೂ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸೇರಿರುವುದರಿಂದ ಹಾಗೂ ಹಿರಿತನ ಹೊಂದಿರುವುದರಿಂದ ಭವಿಷ್ಯದಲ್ಲಿ ಕುರುಬ ಸಮುದಾಯದ ಒಲವು ಗಳಿಸುವ ಉದ್ದೇಶದಿಂದ ಸಚಿವ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ ಲಿಂಗಾಯತ ಸಮುದಾಯಕ್ಕೆ ಎರಡು ಸಚಿವ ಸ್ಥಾನಗಳು ನೀಡುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲಿ ಒಂದು ಸ್ಥಾನ ಪಕ್ಷದಲ್ಲಿ ಹಿರಿಯ ನಾಯಕರಾಗಿರುವ ಹಾಗೂ ವಿಧಾನಪರಿಷತ್ತಿನ ಕೋಟಾದಿಂದ ಬಸವರಾಜ ಹೊರಟ್ಟಿ ಅವರಿಗೆ ಬಹುತೇಕ ಪಕ್ಕಾ ಆಗಿದೆ. ಇನ್ನೊಂದು ಸ್ಥಾನಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸಮಕಾಲೀನರಾಗಿರುವ ಎಂ.ಸಿ.ಮನಗೂಳಿ ಅವರಿಗೆ ನೀಡುವ ನಿರೀಕ್ಷೆಯಿದೆ. ಒಂದು ವೇಳೆ ಮನಗೂಳಿ ಅವರಿಗೆ ತಪ್ಪಿದಲ್ಲಿ ವೆಂಕಟರಾವ್ ನಾಡಗೌಡ ಅವರಿಗೆ ಲಭಿಸಬಹುದು ಎನ್ನಲಾಗುತ್ತಿದೆ.

ದಲಿತರಿಗೆ ಒಂದು ಸ್ಥಾನ ನಿಶ್ಚಿತ. ಎರಡು ಸ್ಥಾನ ನೀಡುವ ಸಂಭವವೂ ಇದೆ. ಬಿಎಸ್‌ಪಿ ಜೊತೆ ಚುನಾವಣಾ ಪೂರ್ವ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಆ ಪಕ್ಷದಿಂದ ಗೆಲುವು ಸಾಧಿಸಿರುವ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ಲಭಿಸುವುದು ಹೆಚ್ಚೂ ಕಡಮೆ ಅಖೈರಾಗಿದೆ.ಪಕ್ಷದಿಂದಲೂ ದಲಿತರಿಗೆ ಒಂದು ಸ್ಥಾನ ನೀಡುವ ಬಗ್ಗೆ ದೇವೇಗೌಡರು ಒಲವು ಹೊಂದಿದ್ದಾರೆ. ಹೀಗಾಗಿ, ಡಾ. ಅನ್ನದಾನಿ ಅಥವಾ ಎಚ್.ಕೆ.ಕುಮಾರಸ್ವಾಮಿ ಪೈಕಿ ಒಬ್ಬರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಣಕಾಸಿನ ಅಗತ್ಯತೆಯನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಎಂ.ಫಾರೂಕ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡುವುದು ಬಹುತೇಕ ನಿರ್ಧಾರವಾಗಿದೆ.

Follow Us:
Download App:
  • android
  • ios