ಬೆಂಗಳೂರಿಗೆ ರಾಜ್ಯದ ಎಲ್ಲ ಭಾಗಗಳಿಂದ ವಲಸೆ ಬಂದಿರುವುದರಿಂದ ಇದು ಹಳೆ ಮೈಸೂರು ಭಾಗದ ಸೊಗಡನ್ನು ಕಳೆದುಕೊಂಡಿದೆ ಎಂದೇ ಹೇಳಬಹುದು. ನವೆಂಬರ್’ನಲ್ಲಿ ನಡೆಸಿರುವ ಸಮೀಕ್ಷೆ ಅನುಸಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಲಿದೆ.
ಬೆಂಗಳೂರು(ಡಿ.8): ರಾಜ್ಯ ರಾಜಕಾರಣದಲ್ಲಿ ಇತರ ಭಾಗಗಳ ತೂಕ ಒಂದಾದರೆ ಹಳೆ ಮೈಸೂರು ಭಾಗದ ತೂಕವೇ ಮತ್ತೊಂದು. ಈ ಪ್ರದೇಶದಲ್ಲಿ ದಶಕಗಳಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಜಿದ್ದಾಜಿದ್ದಿಯ ಹೋರಾಟ ನಡೆಯುತ್ತ ಬಂದಿದೆ. ಬಿಜೆಪಿ ರಾಜ್ಯದ ಇತರೆಡೆ ಪ್ರಾಬಲ್ಯ ಸಾಸಲು ಸಾಧ್ಯವಾದರೂ ಹಳೆ ಮೈಸೂರು ಪ್ರದೇಶದಲ್ಲಿ ಮಾತ್ರ ಭದ್ರವಾಗಿ ಬೇರೂರಲು ಸಫಲವಾಗಿಲ್ಲ.
ರಾಜಧಾನಿ ಬೆಂಗಳೂರು ಹಳೆ ಮೈಸೂರಿನ ವ್ಯಾಪ್ತಿಯಲ್ಲೇ ಇದ್ದರೂ ಚುನಾವಣಾ ದೃಷ್ಟಿಯಿಂದ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ. ಬೆಂಗಳೂರಿಗೆ ರಾಜ್ಯದ ಎಲ್ಲ ಭಾಗಗಳಿಂದ ವಲಸೆ ಬಂದಿರುವುದರಿಂದ ಇದು ಹಳೆ ಮೈಸೂರು ಭಾಗದ ಸೊಗಡನ್ನು ಕಳೆದುಕೊಂಡಿದೆ ಎಂದೇ ಹೇಳಬಹುದು. ನವೆಂಬರ್’ನಲ್ಲಿ ನಡೆಸಿರುವ ಸಮೀಕ್ಷೆ ಅನುಸಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಲಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಹಲವು ಜಿಲ್ಲೆಗಳಲ್ಲಿ ಬಲಾಢ್ಯವಾಗಿರುವ ಒಕ್ಕಲಿಗ ಸಮುದಾಯ ಜೆಡಿಎಸ್ ಬೆನ್ನಿಗೆ ನಿಲ್ಲುವ ಸಂಭವ ಕಂಡು ಬರುತ್ತಿದೆ.
ಒಂದು ಗಮನಿಸಬೇಕಾದ ಸಂಗತಿ ಎಂದರೆ, ಮೊದಲ ಬಾರಿಗೆ ಬಿಜೆಪಿ ಇಲ್ಲಿ ಹಿಂದಿನ ಎಲ್ಲ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಸ್ಥಾನಗಳಿಗೆ ಲಗ್ಗೆ ಹಾಕಲಿದೆ. ಈ ಭಾಗದ ಶೇ.2ರಷ್ಟು ಮತದಾರರು ಮಾತ್ರ ಇದುವರೆಗೆ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದನ್ನು ನಿರ್ಧರಿಸಿಲ್ಲ ಎನ್ನುವುದೂ ಮುಖ್ಯವಾದದ್ದು. ಅಂದರೆ, ಬಹುತೇಕ ಮತದಾರರ ಮನಸ್ಥಿತಿ ಅಂತಿಮಗೊಂಡಂತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇದೇ ಭಾಗದವರು. ಹೀಗಾಗಿ, ಈ ಪ್ರದೇಶ ಮೂವರೂ ಮುಖಂಡರಿಗೆ ಪ್ರತಿಷ್ಠೆಯ ಕಣವಾಗಿದೆ. ಈ ಭಾಗದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಹೆಚ್ಚು ಪ್ರಭಾವ ಬೀರುವುದಿಲ್ಲ. ಅಹಿಂದ ವರ್ಗಗಳಿಗಾಗಿ ಮಾಡಿರುವ ಕಲ್ಯಾಣ ಕಾರ್ಯಕ್ರಮ ಕಾಂಗ್ರೆಸ್ನ ಕೈಹಿಡಿಯಬಹುದು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದುದರಿಂದಲೊ ಏನೋ ಈ ಪ್ರದೇಶದ ಒಟ್ಟು 64 ಸ್ಥಾನಗಳ ಪೈಕಿ 30ರಲ್ಲಿ ಜಯಭೇರಿ ಬಾರಿಸಿತ್ತು.
ಸಮೀಕ್ಷೆ ಅನುಸಾರ ಈ ಬಾರಿ ಅದರ ಪ್ರಮಾಣ 20ಕ್ಕೆ ಕುಸಿಯಲಿದೆ. ಮತ ಗಳಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಅಗುವುದಿಲ್ಲವಾದರೂ ಸ್ಥಾನ ಗಳಿಕೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದೆ ಎಂಬ ಭಾವನೆ ಬಂದಿರಲಿಕ್ಕೂ ಸಾಕು. ಒಕ್ಕಲಿಗ ಸಮುದಾಯದ ಹಿತ ಕಾಪಾಡುವ ಪಕ್ಷ ಜೆಡಿಎಸ್ ಎಂಬ ನಿರೀಕ್ಷೆಯೂ ಕಾರಣವಾಗಿರಬಹುದು. ಕಳೆದ ಚುನಾವಣೆಯಲ್ಲಿ 25 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ 29 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆದರೆ, ಮತ ಗಳಿಕೆಯಲ್ಲಿ ಹೆಚ್ಚಿನ ಏರಿಳಿತ ಆಗಲಿಕ್ಕಿಲ್ಲ ಎಂಬುದು ಸಮೀಕ್ಷೆಯಿಂದ ಹೊರಬಿದ್ದಿರುವ ಮಾಹಿತಿ. ಮೇಲಾಗಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದೇ ಕೊನೆಯ ಚುನಾವಣೆ ಎನ್ನುತ್ತಲೇ ಪ್ರಚಾರದಲ್ಲಿ ತೊಡಗಿರುವುದರಿಂದ ಈ ಭಾಗದ ಜನರು ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮನ್ನಣೆ ನೀಡುವ ಸಂಭವವಿದೆ.
ಇನ್ನು ಬಿಜೆಪಿ ಈ ಬಾರಿ ಹೆಚ್ಚು ಖಾತೆ ತೆರೆಯಲಿದೆ ಎಂದು ಭವಿಷ್ಯವಾಣಿ ನುಡಿದಿದೆ. ಕಳೆದ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 12 ಸ್ಥಾನ ಗೆಲ್ಲುವ ಮೂಲಕ ತಮ್ಮ ಬಲವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳಲಿದೆ. ಚನ್ನಪಟ್ಟಣದ ಹಾಲಿ ಶಾಸಕ ಸಿ.ಪಿ.ಯೋಗೀಶ್ವರ್ ಬಿಜೆಪಿ ಸೇರ್ಪಡೆಯಾಗಿರು ವುದರಿಂದ ಮತ್ತಷ್ಟು ಲಾಭ ತಂದು ಕೊಡುವ ನಿರೀಕ್ಷೆಯಿದೆ.
