Asianet Suvarna News Asianet Suvarna News

ಡಿಎಚ್'ಎಸ್ ಸೇಫ್..!? ಕಾಂಗ್ರೆಸ್'ಗೆ ಜೆಡಿಎಸ್ ಶಾಕ್..! ಸಿದ್ದು ಕರೆಗೂ ಕಿವಿಗೊಡದ ಗೌಡರು

ಡಿಎಚ್ ಶಂಕರಮೂರ್ತಿ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇರುವುದರಿಂದ ಅವರನ್ನ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದರೆ ತಪ್ಪಾಗಬಹುದು ಎಂದನಿಸಿದ್ದರಿಂದ ದೇವೇಗೌಡರು ಕಾಂಗ್ರೆಸ್ ಆಫರನ್ನು ರಿಜೆಕ್ಟ್ ಮಾಡಿದರೆನ್ನಲಾಗಿದೆ.

jds may reject congress offer on assembly council speaker election

ಬೆಂಗಳೂರು(ಜೂನ್ 15): ವಿಧಾನಪರಿಷತ್ ಸಭಾಪತಿ ಸ್ಥಾನದಿಂದ ಬಿಜೆಪಿಯ ಡಿಎಚ್ ಶಂಕರಮೂರ್ತಿಯವರನ್ನ ಹೇಗಾದರೂ ಮಾಡಿ ಕೆಳಗಿಳಿಸುವ ಕಾಂಗ್ರೆಸ್ ಆಸೆಗೆ ತಣ್ಣೀರು ಬೀಳುವ ಸಾಧ್ಯತೆ ಹೆಚ್ಚಿದೆ. ಜಾತ್ಯತೀತತೆಯ ಅಸ್ತ್ರ ಬಿಟ್ಟು ಜೆಡಿಎಸ್ ಪಕ್ಷವನ್ನು ಒಲಿಸಿಕೊಳ್ಳುವ ಕಾಂಗ್ರೆಸ್ ಪ್ರಯತ್ನ ವಿಫಲವಾಗಲಿದೆ. ಜೆಡಿಎಸ್'ನ ಬಸವರಾಜ್ ಹೊರಟ್ಟಿಯವರನ್ನ ಸಭಾಪತಿ ಮಾಡುವುದಾಗಿ ಕಾಂಗ್ರೆಸ್ ಒಡ್ಡಿದ ಪ್ರಲೋಬನೆಗೆ ಜೆಡಿಎಸ್ ಬಗ್ಗಿಲ್ಲ. ಸಭಾಪತಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಜೊತೆಯೇ ಸಖ್ಯ ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ.

ಕಾಂಗ್ರೆಸ್ ಆಫರ್ ಲೇಟಾಯ್ತು?
ಬಸವರಾಜ್ ಹೊರಟ್ಟಿಯವರನ್ನ ಸಭಾಪತಿ ಮಾಡಲು ಈ ಮೊದಲು ಜೆಡಿಎಸ್ ಆಸಕ್ತಿ ತೋರಿತ್ತು. ಆದರೆ, ಕಾಂಗ್ರೆಸ್ ಪಕ್ಷ ಅದಕ್ಕೆ ಒಪ್ಪಿರಲಿಲ್ಲ. ಹೀಗಾಗಿ, ಜೆಡಿಎಸ್ ಪಕ್ಷವು ಕೊನೆಗೆ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿತು. ನಿನ್ನೆ ಜೆಡಿಎಸ್ ಬಹಿರಂಗವಾಗಿಯೇ ತನ್ನ ನಿರ್ಧಾರವನ್ನು ಘೋಷಿಸಿದ ಬಳಿಕ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡಿದೆ. ಬಸವರಾಜ್ ಹೊರಟ್ಟಿಯವರೇ ಅಭ್ಯರ್ಥಿಯಾದರೆ ತಾನು ಬೆಂಬಲ ಕೊಡುವುದಾಗಿ ಕಾಂಗ್ರೆಸ್ ಪಕ್ಷವು ಜೆಡಿಎಸ್'ಗೆ ಆಫರ್ ಕೊಟ್ಟಿತು. ಆದರೆ, ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ ಅವರು ಕಾಂಗ್ರೆಸ್ ಆಫರನ್ನು ನೇರವಾಗಿ ತಿರಸ್ಕರಿಸಿದ್ದಾರೆ. ಹೊರಟ್ಟಿಯವರನ್ನ ಸಭಾಪತಿ ಮಾಡುವುದಾಗಿ ಕಾಂಗ್ರೆಸ್ ಮೊದಲೇ ಹೇಳಬೇಕಿತ್ತು. ಈಗ ಲೇಟಾಗಿದೆ ಎಂದು ಅಪ್ಪಾಜಿ ಗೌಡ ಸುವರ್ಣನ್ಯೂಸ್'ಗೆ ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ಜೆಡಿಎಸ್ ಸದಸ್ಯರು ಈ ವಿಚಾರದಲ್ಲಿ ಪಕ್ಷದ ವರಿಷ್ಠರ ಸೂಚನೆಗೆ ಕಾಯುತ್ತಿದ್ದಾರೆ.

ಗೌಡರ ಲೆಕ್ಕಾಚಾರ..?
ಮತ್ತೊಂದು ಮೂಲದ ಮಾಹಿತಿ ಪ್ರಕಾರ, ಡಿಎಚ್ ಶಂಕರಮೂರ್ತಿ ಅವರು ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆ ಇರುವುದರಿಂದ ಅವರನ್ನ ಸಭಾಪತಿ ಸ್ಥಾನದಿಂದ ಕೆಳಗಿಳಿಸಿದರೆ ತಪ್ಪಾಗಬಹುದು ಎಂದನಿಸಿದ್ದರಿಂದ ದೇವೇಗೌಡರು ಕಾಂಗ್ರೆಸ್ ಆಫರನ್ನು ರಿಜೆಕ್ಟ್ ಮಾಡಿದರೆನ್ನಲಾಗಿದೆ. ಶಂಕರಮೂರ್ತಿ ರಾಜ್ಯಪಾಲರಾದರೆ, ಕೆಲ ತಿಂಗಳ ಬಳಿಕ ತಮ್ಮ ಪಕ್ಷದ ಅಭ್ಯರ್ಥಿಗೆಯೇ ಬಿಜೆಪಿ ಬೆಂಬಲ ಕೊಡಬಹುದು. ಕೆಲ ತಿಂಗಳಿಗೋಸ್ಕರ ಬಿಜೆಪಿಗೆ ಜೆಡಿಎಸ್ ದ್ರೋಹ ಮಾಡಿತೆಂಬ ಆಪಾದನೆ ಬರುವ ಅಪಾಯವಿದ್ದರಿಂದ ದೇವೇಗೌಡರು ಬಿಜೆಪಿ ಜೊತೆಯೇ ಸಖ್ಯ ಮುಂದುವರಿಸಲು ನಿರ್ಧರಿಸಿದ್ದಾರೆನ್ನಲಾಗಿದೆ.

ಮತ್ತೊಂದು ಸುದ್ದಿಯ ಪ್ರಕಾರ, ನಿನ್ನೆ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದ ವಿರುದ್ಧ ಕಠಿಣ ವಾಗ್ಬಾಣ ಹರಿಸಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಇರಿಸುಮುರುಸು ತಂದಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಬಾರದೆಂದು ಜೆಡಿಎಸ್ ಮುಖಂಡರು ನಿರ್ಧಾರಕ್ಕೆ ಬಂದರೆನ್ನಲಾಗುತ್ತಿದೆ. ಸಭಾಪತಿ ಪದಚ್ಯುತಿ ವಿಚಾರದಲ್ಲಿ ತಮಗೆ ಬೆಂಬಲ ನೀಡುವಂತೆ ಕೋರಲು ಸಿಎಂ ಸಿದ್ದರಾಮಯ್ಯನವರೇ ಖುದ್ದಾಗಿ ದೇವೇಗೌಡರಿಗೆ ಕರೆ ಮಾಡಿದ್ದರಂತೆ. ಆದರೆ, ಗೌಡರು ಆ ಕರೆಗೆ ಓಗೊಡಲಿಲ್ಲವೆನ್ನಲಾಗಿದೆ. ಜಿ.ಪರಮೇಶ್ವರ್ ಕೂಡ ಮನವೊಲಿಕೆಗೆ ಪ್ರಯತ್ನಿಸಿದ್ದರು.

ಇಂದು, ವಿಧಾನಪರಿಷತ್'ನಲ್ಲಿ ಪ್ರಶ್ನೋತ್ತರ ಅವಧಿ ಬಳಿಕ ಸಭಾಪತಿ ಡಿಎಚ್ ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಹೊರಡಿಸಿರುವ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ.

Follow Us:
Download App:
  • android
  • ios