ವಿಧಾನ ಸಭೆ ಚುನಾವಣೆ ಒಂದೂವರೆ ವರ್ಷ ಇರುವಾಗಲೇ, ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ರಾಜ್ಯ ಕಾಂಗ್ರೆಸ್ನಲ್ಲಿನ ಅತೃಪ್ತರನ್ನು ಜೆಡಿಎಸ್ ತನ್ನತ್ತ ಸೆಳೆಯಲು ಜೆಡಿಎಸ್ ಈಗಿನಿಂದಲೇ ಕಾರ್ಯಾರಂಭ ಮಾಡಿದೆ. ಈಗಾಗಲೇ ಮುನಿಸಿಕೊಂಡಿರುವ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಅಂಬರೀಶ್ ಜೊತೆಗೆ ಮಾತುಕತೆ ನಡೆಸಿರುವ ಜೆಡಿಎಸ್ ನಾಯಕರು. ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರು(ಅ.21): ವಿಧಾನ ಸಭೆ ಚುನಾವಣೆ ಒಂದೂವರೆ ವರ್ಷ ಇರುವಾಗಲೇ, ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿವೆ. ರಾಜ್ಯ ಕಾಂಗ್ರೆಸ್ನಲ್ಲಿನ ಅತೃಪ್ತರನ್ನು ಜೆಡಿಎಸ್ ತನ್ನತ್ತ ಸೆಳೆಯಲು ಜೆಡಿಎಸ್ ಈಗಿನಿಂದಲೇ ಕಾರ್ಯಾರಂಭ ಮಾಡಿದೆ. ಈಗಾಗಲೇ ಮುನಿಸಿಕೊಂಡಿರುವ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಅಂಬರೀಶ್ ಜೊತೆಗೆ ಮಾತುಕತೆ ನಡೆಸಿರುವ ಜೆಡಿಎಸ್ ನಾಯಕರು. ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಪಕ್ಷ ಬಲ ಪಡಿಸಲು ಜೆಡಿಎಸ್ ಕಸರತ್ತು
ರಾಜ್ಯ ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆಗಲೇ ಜೆಡಿಎಸ್ ತೆರೆಮರೆಯಲ್ಲಿ ಪಕ್ಷ ಬಲವರ್ಧನೆ ಕಸರತ್ತು ನಡೆಸಿದೆ.. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ವಂಚಿತರು, ಮತ್ತು ಅಧಿಕಾರ ಕಳೆದುಕೊಂಡವರನ್ನ ತನ್ನತ್ತ ಸೆಳೆಯೋ ಪ್ರಯತ್ನ ಆರಂಭಿಸಿದೆ.
ಅಂಬಿ, ಜಾರಕಿಹೊಳಿಗೆ ಗಾಳ ಹಾಕಿದ ಜೆಡಿಎಸ್
ಮಾಜಿ ಸಚಿ ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿದ್ದು, ಪಕ್ಷದ ಚಟುವಟಿಕೆಗಳಿಂದ ಈಗಾಗಲೇ ದೂರ ಉಳಿದಿದ್ದಾರೆ. ಇವರನ್ನು ಸಮಾಧಾನ ಪಡಿಸಲು ಸ್ವತಃ ಅವರ ಸೋದರ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿಗೆ ಸಿಎಂ ಸೂಚಿಸಿದ್ದಾರೆ. ಜೊತೆಗೆ ಸಚಿವ ಕೆ.ಜೆ. ಜಾರ್ಜ್ ಕೂಡ ಅವರ ಮನವೊಲಿಕೆ ಕಸರತ್ತು ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಂದಾಗಿದ್ದು, ದೂರವಾಣಿ ಮೂಲ್ಕ ಜಾರಕಿಹೊಳಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಲ್ಲದೇ ಜೆಡಿಎಸ್ಗೆ ಆಹ್ವಾನ ನೀಡಿದ್ದಾರಂತೆ.
ಮಂಡ್ಯ ಶಾಸಕ ಮಾಜಿ ಸಚಿವ ಅಂಬರೀಶ್ ಸಿಎಂ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ಕೊಟ್ಟು ಕಾಂಗ್ರೆಸ್'ನಿಂದ ಒಂದು ಹೆಜ್ಜೆ ಹೊರಗಿಟ್ಟ ಅಂಬರೀಶ್ಗೂ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರು ಪಕ್ಷದ ವರಿಷ್ಠರ ಸೂಚನೆಯಂತೆ ಆಹ್ವಾನ ನೀಡಿದ್ದಾರಂತೆ.
ಸಿಎಂ ಇಬ್ರಾಹಿಂ ಸೆಳೆಯಲು ನಡೆದಿದೆ ಸರ್ಕಸ್
ಸಿಎಂ ಪರಮಾಪ್ತರಲ್ಲಿ ಗುರುತಿಸಿಕೊಂಡಿದ್ದ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂಗೂ ಕೂಡ ಜೆಡಿಎಸ್ ನಾಯಕರು ಗಾಳ ಹಾಕಿದ್ದು, ಅವರೂ ಜೆಡಿಎಸ್ ಕಡೆಗೆ ವಾಲುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕರು ಸಿಎಂ ಇಬ್ರಾಹಿಂ ನಿವಾಸಕ್ಕೆ ತೆರಳಿ ಪಕ್ಷದಲ್ಲೇ ಉಳಿಸಿಕೊಳ್ಳುವ ಯತ್ನ ನಡೆಸಿದರು ಎನ್ನಲಾಗಿದೆ.
ಇದು ಆರಂಭದ ಪ್ರಯತ್ನವಷ್ಟೇ, ಕಾಂಗ್ರೆಸ್'ನಲ್ಲಿ ಅತೃಪ್ತರ ಪಟ್ಟಿ ದೊಡ್ಡದಿದೆ. ಹಂತ ಹಂತವಾಗಿ ಜೆಡಿಎಸ್ ನಾಯಕರು ಇವರನ್ನೆಲ್ಲ ತಮ್ಮತ್ತ ಸೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳಲ್ಲೇ ಕೇಳಿ ಬರುತ್ತಿದೆ.
