Asianet Suvarna News Asianet Suvarna News

ಸಿದ್ದು ರೀತಿ ಕಾಂಗ್ರೆಸ್'ಗೆ ನಮಗೂ ಗ್ರಾಂಡ್ ಎಂಟ್ರಿ ಕೊಡಿ: ಜೆಡಿಎಸ್ ದುಂಬಾಲು

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಬಂಡಾಯ ಶಾಸಕರು ತಮ್ಮ ಕಾಂಗ್ರೆಸ್ ಸೇರ್ಪಡೆ ಸಮಾರಂಭವು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗ  ನಡೆದಂತೆಯೇ ಅದ್ಧೂರಿಯಾಗಿ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

JDS Leaders would like to have Grand Function to Join Congress

ಬೆಂಗಳೂರು (ಜ.10): ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಬಂಡಾಯ ಶಾಸಕರು ತಮ್ಮ ಕಾಂಗ್ರೆಸ್ ಸೇರ್ಪಡೆ ಸಮಾರಂಭವು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗ  ನಡೆದಂತೆಯೇ ಅದ್ಧೂರಿಯಾಗಿ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ವಾಸ್ತವವಾಗಿ ರಾಜ್ಯ ಕಾಂಗ್ರೆಸ್ ನಾಯಕತ್ವವು ಬಂಡಾಯ ಜೆಡಿಎಸ್ ಶಾಸಕರನ್ನು ಈ ಮಾಸಾಂತ್ಯದ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಉದ್ದೇಶಿಸಿದೆ. ರಾಹುಲ್ ಪ್ರವಾಸದ ವೇಳೆ ಎಸ್‌ಟಿ ಸಮಾವೇಶ, ಮಹಿಳಾ ಸಮಾವೇಶ ಮತ್ತು ರೈತ ಹಾಗೂ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲು ಕೆಪಿಸಿಸಿ ಉದ್ದೇಶಿಸಿದೆ. ಸಾಧ್ಯವಾದರೆ ಇದರ ನಡುವೆಯೇ  ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿ. ಇದು ಬೇಡ ಎನ್ನುವುದಾದರೆ ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಬಂದಾಗ ಪಕ್ಷ ಸೇರಲಿ ಎಂದು ಕೆಪಿಸಿಸಿ ನಾಯಕತ್ವ ಬಯಸುತ್ತದೆ. ಆದರೆ, ಇದು ಜೆಡಿಎಸ್ ಬಂಡಾಯ ಶಾಸಕರಿಗೆ ಒಪ್ಪಿಗೆಯಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಸೇರಿದಾಗ ಸೋನಿಯಾ ಗಾಂಧಿ ಆಗಮಿಸಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗಿತ್ತು. ಅದೇ ಮಾದರಿಯಲ್ಲಿ ಅರಮನೆ ಮೈದಾನದಲ್ಲಿ ಸುಮಾರು ಆರೇಳು ಲಕ್ಷ ಜನರನ್ನು ಸೇರಿಸಿ ಅದ್ಧೂರಿ ಕಾರ್ಯಕ್ರಮ ನಡೆಸಬೇಕು ಮತ್ತು ತಮ್ಮನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವುದಾಕ್ಕಾಗಿಯೇ ರಾಹುಲ್ ಗಾಂಧಿ ಪ್ರತ್ಯೇಕವಾಗಿ ರಾಜ್ಯಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ಬಾರಿ ರಾಹುಲ್ ಪ್ರವಾಸದ ವೇಳೆ ನಾವು ಪಕ್ಷ ಸೇರುವುದಿಲ್ಲ. ರಾಹುಲ್ ಗಾಂಧಿ ಅವರು ಬಜೆಟ್ ಅಧಿವೇಶನಕ್ಕೆ ಮುನ್ನ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಪಕ್ಷ ಸೇರ್ಪಡೆಯಾದರೆ ನಮ್ಮ ಮೇಲೆ ಕ್ರಮ ಜರುಗಿಸುವ ಅನಗತ್ಯ ಅವಕಾಶವನ್ನು ಜೆಡಿಎಸ್‌ಗೆ ನೀಡಿದಂತಾಗುತ್ತದೆ. ಹೀಗಾಗಿ ಈಗ ಬೇಡ. ಫೆಬ್ರವರಿಯಲ್ಲಿ ಪ್ರತ್ಯೇಕವಾಗಿ ಒಂದು ಸಮಾವೇಶ ಆಯೋಜಿಸೋಣ. ಆ ಸಮಾವೇಶವನ್ನು ನಾವೇ ನಡೆಸುತ್ತವೆ. ಸುಮಾರು ಆರೇಳು ಲಕ್ಷ ಜನರನ್ನು ಸೇರಿ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುವ ಹೊಣೆ ಹೊರಲು ಸಿದ್ಧರಿದ್ದೇವೆ ಎಂದು ಅವರು  ತಿಳಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್ ಅಹಮದ್, ಅಖಂಡ  ಶ್ರೀನಿವಾಸ್, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಚೆಲುವರಾಯ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಹಾಗೂ ಬಾಲಕೃಷ್ಣ ಅವರ ಈ ಆಗ್ರಹವನ್ನು ರಾಹುಲ್ ಅವರ ಮುಂದಿಡಲು ಇದೀಗ ಕೆಪಿಸಿಸಿ ನಾಯಕತ್ವ ತೀರ್ಮಾನಿಸಿದೆ. ಜ.13 ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಕರೆದಿರುವ ರಾಜ್ಯ ನಾಯಕರ ಸಭೆಯಲ್ಲಿ ಈ ವಿಚಾರವೂ ಚರ್ಚೆಯಾಗಲಿದೆ ಎನ್ನಲಾಗಿದೆ.

 

Follow Us:
Download App:
  • android
  • ios