ಕಾಂಗ್ರೆಸ್ ಮುಖಂಡರ ಈ ನಿರ್ಧಾರಕ್ಕೆ ಇದೀಗ ಜೆಡಿಎಸ್ ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮೂರು ಹುದ್ದೆಗಳ ನೇಮಕದ ಸಂಬಂಧ ಕಾಂಗ್ರೆಸ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತವಾಗಿದೆ. 

ಬೆಂಗಳೂರು : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಮೂರು ಪ್ರಮುಖ ನೇಮಕ ಕುರಿತ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್‌ ನಾಯಕರು ಮಿತ್ರ ಪಕ್ಷ ಕಾಂಗ್ರೆಸ್ಸಿನ ವರಿಷ್ಠರಿಗೆ ದೂರು ರವಾನಿಸಿದ್ದಾರೆ.

ಸದ್ಯ ರಾಜಸ್ಥಾನದ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ಸಿನ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಮತ್ತು ಇನ್ನೊಬ್ಬ ಹಿರಿಯ ನಾಯಕ ಅಹಮದ್‌ ಪಟೇಲ್‌ ಅವರಿಗೆ ದೂರವಾಣಿ ಮೂಲಕ ಜೆಡಿಎಸ್‌ ನಾಯಕರು ತಮ್ಮ ಅತೃಪ್ತಿಯನ್ನು ತಲುಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್ಸಿನ ಈ ಹಿರಿಯ ನಾಯಕರು ತಮ್ಮ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಗಮನಕ್ಕೆ ತರುವುದಾಗಿ ಜೆಡಿಎಸ್‌ ನಾಯಕರಿಗೆ ಭರವಸೆಯನ್ನೂ ನೀಡಿದ್ದಾರೆ. ಇದೇ ವೇಳೆ ದೆಹಲಿಯಲ್ಲಿರುವ ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಜೆಡಿಎಸ್‌ ಅತೃಪ್ತಿಗೊಂಡಿರುವುದಕ್ಕೆ ಕಾರಣವಾದ ಮೂರು ಅಂಶಗಳು- ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ನೇಮಕ ತೀರ್ಮಾನ.

ಈ ಮೂರು ಹುದ್ದೆಗಳು ನೇರವಾಗಿ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳಿಗೆ ಸಂಬಂಧಿಸುವಂಥವು. ಅವುಗಳಿಗೆ ನೇಮಕ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಕಾಂಗ್ರೆಸ್‌ ನಾಯಕರಿಗೂ ಇದೆಯಾದರೂ ಯಾರಾಗಬಹುದು ಎಂಬುದರ ಬಗ್ಗೆ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಬೇಕಿತ್ತು ಎಂಬುದು ಜೆಡಿಎಸ್‌ ನಾಯಕರ ಆಕ್ಷೇಪ.

ಅದರಲ್ಲೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಯಾರಾಗಬೇಕು ಎಂಬುದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸದೇ ತೀರ್ಮಾನ ಕೈಗೊಂಡಿದ್ದರ ಬಗ್ಗೆ ಜೆಡಿಎಸ್‌ ನಾಯಕರು ತೀವ್ರ ಆಕ್ರೋಶಗೊಂಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ಇಬ್ಬರನ್ನು ನೇಮಕ ಮಾಡಿಕೊಳ್ಳುವ ಅವಕಾಶವಿದೆ. ಕಾಂಗ್ರೆಸ್‌ನಿಂದ ನೇಮಕ ಕುರಿತು ನಿರ್ಧಾರ ಪ್ರಕಟಿಸುವ ಮೊದಲು ಯಾರನ್ನು ನೇಮಕ ಮಾಡಿದರೆ ಸೂಕ್ತವಾದೀತು ಎಂಬುದನ್ನಾದರೂ ಸಮಾಲೋಚನೆ ಮಾಡಬೇಕಾಗಿತ್ತು. ಯಾವುದನ್ನೂ ಮಾಡದೆ ನೇರವಾಗಿ ಮಾಧ್ಯಮಗಳಲ್ಲಿ ನೇಮಕ ಕುರಿತ ನಿರ್ಧಾರ ಪ್ರಕಟಿಸಿರುವುದು ಸರಿಯಲ್ಲ ಎಂಬ ಮಾತನ್ನು ಜೆಡಿಎಸ್‌ ನಾಯಕರು ಮಿತ್ರ ಪಕ್ಷವಾದ ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದಾರೆ.

ಆದರೆ, ಕಾಂಗ್ರೆಸ್‌ ಪಕ್ಷದ ನಾಯಕರು ಈಗಾಗಲೇ ಈ ಮೂರು ಪ್ರಮುಖ ಹುದ್ದೆಗಳಿಗೆ ಹೆಸರುಗಳನ್ನು ಅಂತಿಮಗೊಳಿಸಿ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಶಾಸಕ ವಿ.ಮುನಿಯಪ್ಪ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಹುದ್ದೆಗೆ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ದೆಹಲಿ ವಿಶೇಷ ಪ್ರತಿನಿಧಿಯಾಗಿ ಶಾಸಕ ಡಾ.ಅಜಯ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಪ್ರಸ್ತಾಪಿಸಿದೆ. ಆದರೆ, ಆ ಕುರಿತ ಕಡತಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಂಕಿತ ಹಾಕಿಲ್ಲ. ಇದೀಗ ಜೆಡಿಎಸ್‌ ನಾಯಕರ ಆಕ್ಷೇಪದ ಹಿನ್ನೆಲೆಯಲ್ಲಿ ಹೆಸರುಗಳಲ್ಲಿ ಬದಲಾವಣೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.