ಚನ್ನಪಟ್ಟಣ :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಕೆಲ ದಿನಗಳಿಂದ ಹೊಗೆಯಾಡುತ್ತಿದ್ದ ಜೆಡಿಎಸ್‌ನಲ್ಲಿ ಹೊಗೆಯಾಡುತ್ತಿದ್ದ ಭಿನ್ನಮತ ಇದೀಗ ಸ್ಫೋಟಗೊಂಡಿದೆ. ರಾಮನಗರ ಕ್ಷೇತ್ರದ ಶಾಸಕಿ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಸ್ಥಳೀಯ ಜೆಡಿಎಸ್‌ ಮುಖಂಡರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ನಗರದ ಅಂಬೇಡ್ಕರ್‌ ಭವನದ ಮುಂದುವರೆದ ಕಾಮಗಾರಿಗಳಿಗೆ ಪೂಜೆ ಮತ್ತು ತಾಲೂಕಿನ ಕೆರೆ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನಿತಾ ಕುಮಾರಸ್ವಾಮಿ ಚಾಲನೆ ನೀಡಿದರು. 

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತುಗೆ ಆಹ್ವಾನ ನೀಡಿರಲಿಲ್ಲ. ಜಯಮುತ್ತು ಪ್ರಾಬಲ್ಯ ಹೊಂದಿರುವ ಅಕ್ಕೂರು ಜಿ.ಪಂ. ವ್ಯಾಪ್ತಿಯ ಹಾರೋಕೊಪ್ಪ ಗ್ರಾಮದಲ್ಲಿ ನಡೆದ ಸುವರ್ಣ ಗ್ರಾಮ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮಕ್ಕೂ ಆಹ್ವಾನಿಸದಿರುವುದು ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕಾರ್ಯಕ್ರಮಕ್ಕೆ ಜಯಮುತ್ತು ಬೆಂಬಲಿಗರು ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಜಾಲ ತಾಣಗಳಲ್ಲೂ ಕಿಡಿಕಾರಿದರು.

ಅನಿತಾ ವಿರುದ್ಧ ಆಕ್ರೋಶ: ಅದರಂತೆ ಅಕ್ಕೂರು ಜಿಪಂ ವಾಟ್ಸ್‌ ಆ್ಯಪ್‌ ಗ್ರೂಪ್‌ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಜಯಮುತ್ತು ಬೆಂಬಲಿಗರು ಅನಿತಾ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ಸಾಕಷ್ಟುಪರ-ವಿರೋಧ ಚರ್ಚೆಗಳೂ ನಡೆಯಿತು.