ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಬೇಕಾಗಿರುವ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮತ್ತು ಸೋಲು ಅನುಭವಿಸಿದ ಅಭ್ಯರ್ಥಿಗಳೊಂದಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ ಎಂದು ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ ತಿಳಿಸಿದ್ದಾರೆ. 

ಬೆಂಗಳೂರು :  ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಪಕ್ಷವನ್ನು ಸಂಘಟಿಸಬೇಕಾಗಿರುವ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮತ್ತು ಸೋಲು ಅನುಭವಿಸಿದ ಅಭ್ಯರ್ಥಿಗಳೊಂದಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ ಎಂದು ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ವೇಳೆ ತೃತೀಯ ರಂಗದ ಶಕ್ತಿ ಪ್ರದರ್ಶನವಾಗಿದೆ. ಅದು ಮತ್ತಷ್ಟುಬಲಿಷ್ಠವಾಗಬೇಕಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ಸನ್ನು ಸಂಘಟಿಸುವ ಹೊಣೆ ಪಕ್ಷದ ಪ್ರತಿ ನಾಯಕರ ಮೇಲಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಜಯಗಳಿಸಿದ ಮತ್ತು ಸೋಲು ಅನುಭವಿಸಿದ ಅಭ್ಯರ್ಥಿಗಳ ಜತೆ ದೇವೇಗೌಡರು ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ರಚನೆಯಾದ ಬಳಿಕ ಸಭೆ ನಡೆಯಲಿದ್ದು, ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಸೂಕ್ಷ್ಮವಾಗಿದ್ದು, ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಎಲ್ಲಿ ಏನನ್ನು ಕಳೆದುಕೊಂಡಿದ್ದೇವೋ, ಅಲ್ಲಿ ಅದನ್ನು ಹುಡುಕಿಕೊಳ್ಳಬೇಕು. ಚುನಾವಣೆಯಲ್ಲಿ ಸೋಲನುಭವಿಸಿದವರು ವಿಧಾನಪರಿಷತ್‌ಗೆ ಸ್ಥಾನ ಕೇಳುವುದು ಸರಿಯಲ್ಲ ಎಂದರು.

ಮತ್ತೊಂದೆಡೆ ಕೇರಳದ ಜೆಡಿಎಸ್‌ ರಾಜ್ಯಾಧ್ಯಕ್ಷ ಜೋಸ್‌ ಥೆಟಿಯಲ್‌ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಡಳಿತ ಪ್ರಾರಂಭವಾಗಿದೆ. ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರ ಆಡಳಿತ ನೀಡಲಿದ್ದಾರೆ. ಲೋಕಸಭೆ ಚುನಾವಣೆಗೆ ಈಗಾಗಲೇ ಪಕ್ಷವು ಸಿದ್ಧಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯಿಂದ ಜನರು ಬೇಸತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಂತಿದೆ. ಲೋಕಸಭೆ ಚುನಾವಣೆಗೆ ಪ್ರಧಾನಿಯವರನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ನುಡಿದರು.