ಬೆಂಗಳೂರು [ಜು.07] : ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಶಾಸಕರ ರಾಜೀನಾಮೆಗೆ ಬೆಳವಣಿಗೆಗೆ ಕಾರಣ ಎಂದು ಆಕ್ರೋಶಗೊಂಡಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಈ ಸಂಬಂಧ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಶಾಸಕರ ರಾಜೀನಾಮೆ ಬೆಳವಣಿಗೆಗಳು ನಡೆದ ಬೆನ್ನಲ್ಲೇ ಸಂಜೆ ವೇಳೆ ದೂರವಾಣಿ ಮೂಲಕ ಕಾಂಗ್ರೆಸ್ಸಿನ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರನ್ನು ಸಂಪರ್ಕಿಸಿದ ದೇವೇಗೌಡರು, ರಾಜೀನಾಮೆ ನೀಡಿರುವ ಶಾಸಕರ ಪೈಕಿ ಸಿದ್ದರಾಮಯ್ಯ ಅವರ ಬೆಂಬಲಿಗರ ಸಂಖ್ಯೆಯೇ ಹೆಚ್ಚು. 

ಅವರು ಮನಸ್ಸು ಮಾಡಿದ್ದರೆ ರಾಜೀನಾಮೆಯನ್ನು ತಡೆಯಬಹುದಿತ್ತು. ಆದರೆ, ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಹರಿಹಾಯ್ದರು ಎಂದು ಮೂಲಗಳು ತಿಳಿಸಿವೆ. ನಂತರ ತಮ್ಮನ್ನು ಭೇಟಿಯಾಗಲು ಆಗಮಿಸಿದ್ದ ಕಾಂಗ್ರೆಸ್ಸಿನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ಬಳಿಯೂ ದೇವೇಗೌಡರು ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.