ಬೆಂಗಳೂರು :   ಕಳೆದ ಆರು ತಿಂಗಳಿನಿಂದ ಶಿಕ್ಷಣ ಇಲಾಖೆಗೆ ಸಚಿವರನ್ನು ನೇಮಕ ಮಾಡದಿರುವ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಶಿಕ್ಷಣದ ಹಕ್ಕಿನ ಪಾತ್ರ ಕುರಿತ ಒಂದು ದಿನದ ಸಮಾಲೋಚನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಗೆ ಸಮರ್ಥ ಸಚಿವರನ್ನು ನೇಮಿಸುವ ಅಗತ್ಯತೆ ಇದೆ. ಶಿಕ್ಷಣ ಸಚಿವರೇ ಇಲ್ಲದಿದ್ದರೆ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಹೇಗೆ ಸಿಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಸರ್ಕಾರ ಈ ಕುರಿತು ನಿರ್ಲಕ್ಷ್ಯ ಮಾಡಬಾರದು ಎಂದು ಅಭಿಪ್ರಾಯಪಟ್ಟರು. 

2018 ಅಕ್ಟೋಬರ್ 12 ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸ್ಥಾನಕ್ಕೆ ಎನ್.ಮಹೇಶ್ ವೈಯಕ್ತಿಕ ಕಾರಣ ನೀಡಿ ದಿಢೀರ್ ರಾಜೀನಾಮೆ ಕೊಟ್ಟಿದ್ದರು. ಬಳಿಕ ಶಿಕ್ಷಣ ಖಾತೆ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಕೈಸೇರಿತ್ತು. ಆದರೆ ತೆರವಾದ ಸ್ಥಾನಕ್ಕೆ ಆರು ತಿಂಗಳಾದರೂ ಮುಖ್ಯಮಂತ್ರಿಗಳು ಸಚಿವರನ್ನು ನೇಮಕ ಮಾಡದಿರುವ ಕುರಿತು ಇದೀಗ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರು ಬೇಸರ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಬಾಲ ಕಾರ್ಮಿಕ ವಿರೋಧಿ ದಿನ ಆಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಕಾರ್ಮಿಕ ಇಲಾಖೆಯಲ್ಲಿ ಅನುದಾನದ ಕೊರತೆ ಇಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ಕಲ್ಯಾಣ ಕಾರ್ಯಕ್ರಮ ರೂಪಿಸುತ್ತಿಲ್ಲ. ಸಂಬಂಧಪಟ್ಟ ಇಲಾಖೆಯಲ್ಲಿ ಪ್ರಸ್ತುತ ಸಚಿವರೇ ಇಲ್ಲದಿರುವುದರಿಂದ ಅಧಿಕಾರಿಗಳಿಗೆ ಮಕ್ಕಳ ಕುರಿತು ಆಸಕ್ತಿಯೂ ಇಲ್ಲದಂತಾಗಿದೆ. ಕಾರ್ಮಿಕ ಮತ್ತು ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳು,  ಸಂಘ-ಸಂಸ್ಥೆಗಳು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಶಿಕ್ಷಣದ ಹಕ್ಕಿನ ಕುರಿತು ಚಿಂತನೆ ನಡೆಸಬೇಕಿದೆ.

ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಚುನಾಯಿತರಾಗುವ ಸದಸ್ಯರು ಸರ್ಕಾರಿ ಶಾಲೆಗಳಲ್ಲಿ ಓದುವ ಬಡವರ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡದ ಮಕ್ಕಳ ಶಿಕ್ಷಣದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂದು ಆರೋಪಿಸಿದ ವಿಶ್ವನಾಥ್, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಶಿಕ್ಷಕರ ವರ್ಗಾವಣೆ ಇತ್ಯಾದಿ ವಿಷಯಗಳಿಗೆ ನೀಡುವಂತ ಪ್ರಾಮುಖ್ಯತೆಯನ್ನು ಬಡ ವಿದ್ಯಾರ್ಥಿಗಳ ಬಗ್ಗೆ ನೀಡುತ್ತಿಲ್ಲ. ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆಗಳ ಬಗ್ಗೆ ಚುನಾಯಿತ ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ತಜ್ಞ ಮುಖ್ಯಸ್ಥ ಡಾ.ವಿ.ಪಿ.ನಿರಂಜನಾರಾಧ್ಯ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಖಾಸಗಿ ಶಾಲೆಗಳು ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಆರೋಗ್ಯ, ನೀರು, ವಸತಿ, ಉದ್ಯೋಗ ಎಷ್ಟು ಮುಖ್ಯವೋ ಮೂಲಭೂತ ಅವಶ್ಯಕತೆಯಲ್ಲಿ ಶಿಕ್ಷಣವೂ ಅಷ್ಟೇ ಮುಖ್ಯ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಆಗಬೇಕಾದರೆ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಅವಶ್ಯಕತೆ ಇದೆ ಎಂದು ತಿಳಿಸಿದರು.