ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ‘ಕೈ’ ಪಾಳಯದಲ್ಲಿ ಭಿನ್ನಮತ ಎಲ್ಲೆ ಮೀರಿದ ಬೆನ್ನಲ್ಲೇ ಜೆಡಿಎಸ್‌ನಲ್ಲಿಯೂ ಅಸಮಾಧಾನದ ಹೊಗೆ ಹೊರಬರಲಾರಂಭಿಸಿದ್ದು, ಪರಿಶಿಷ್ಟಜನಾಂಗಕ್ಕೆ ಅನ್ಯಾಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ‘ಕೈ’ ಪಾಳಯದಲ್ಲಿ ಭಿನ್ನಮತ ಎಲ್ಲೆ ಮೀರಿದ ಬೆನ್ನಲ್ಲೇ ಜೆಡಿಎಸ್‌ನಲ್ಲಿಯೂ ಅಸಮಾಧಾನದ ಹೊಗೆ ಹೊರಬರಲಾರಂಭಿಸಿದ್ದು, ಪರಿಶಿಷ್ಟಜನಾಂಗಕ್ಕೆ ಅನ್ಯಾಯ ಎಸಗಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಎಸ್‌ಪಿ ಪಕ್ಷದ ಎನ್‌.ಮಹೇಶ್‌ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ ಸಮುದಾಯದ ಕೋಟಾದಲ್ಲಿ ಅವರೊಬ್ಬರಿಗೆ ನೀಡಲಾಗಿದೆ. ಜೆಡಿಎಸ್‌ ಪಕ್ಷದ ದಲಿತ ಶಾಸಕರಿಗೆ ಮಾನ್ಯತೆ ನೀಡಿಲ್ಲ. ಆದರೆ, ಒಕ್ಕಲಿಗ ಸಮುದಾಯಕ್ಕೆ ಮಾತ್ರ ಆರು ಮಂದಿಗೆ ನೀಡಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ಜಾತಿ ತಾರತಮ್ಯ ಮಾಡಲಾಗಿದೆ ಆರೋಪಗಳು ಕೇಳಿ ಬಂದಿವೆ. ಪಕ್ಷದ ದಲಿತರಿಗೆ ಅವಕಾಶ ನೀಡದೆ ವಂಚನೆ ಮಾಡಲಾಗಿದೆ ಎಂದು ದಲಿತ ಸಮುದಾಯದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ನಲ್ಲಿ ನಾಲ್ವರು ದಲಿತ ನಾಯಕರು ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಆದರೂ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಒಕ್ಕಲಿಗ ಸಮುದಾಯಕ್ಕೆ ಮಾತ್ರ ಮಾನ್ಯತೆ ನೀಡಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಆರು ಮಂದಿ ಒಕ್ಕಲಿಗ ಸಮುದಾಯದವರು ಸಚಿವರಾಗಿದ್ದಾರೆ. ಅದರಲ್ಲೂ ದಲಿತ ಸಮುದಾಯಕ್ಕೆ ಸಕಲೇಶಪುರ ಕ್ಷೇತ್ರದ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಐದು ಬಾರಿ ಶಾಸಕರಾದರೂ ಸಚಿವ ಸ್ಥಾನ ಸಿಕ್ಕಿಲ್ಲ. ಅಂತೆಯೇ ನಾಗಠಾಣ ಕ್ಷೇತ್ರ ದೇವಾನಂದ ಚವ್ಹಾಣ್‌, ಮಾನ್ವಿ ಕ್ಷೇತ್ರದ ರಾಜಾ ವೆಂಕಟಪ್ಪ ನಾಯಕ (ಎಸ್‌ಟಿ), ಮಳವಳ್ಳಿ ಕ್ಷೇತ್ರದ ಕೆ. ಅನ್ನದಾನಿ ಸಹ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು.

ಬಿಎಸ್‌ಪಿ ಎಂದ್ರೆ ಜೆಡಿಎಸ್‌ ಅಲ್ಲ: ಬಿಎಸ್‌ಪಿ ಮಿತ್ರ ಪಕ್ಷವೇ ಹೊರತು ಜೆಡಿಎಸ್‌ ಪಕ್ಷವಲ್ಲ. ಚುನಾವಣಾ ಪೂರ್ವದಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆಯೇ ವಿನಃ ಬಿಎಸ್‌ಪಿಯ ಮಹೇಶ್‌ ಅವರನ್ನು ಜೆಡಿಎಸ್‌ನ ಅಭ್ಯರ್ಥಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಜೆಡಿಎಸ್‌ ಪಕ್ಷದ ದಲಿತ ಶಾಸಕರಿಗೆ ಮಣೆ ಹಾಕಬೇಕಾಯಿತು. ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಾಯಿತು. ಒಕ್ಕಲಿಗ ಸಮುದಾಯಕ್ಕೆ ಅಷ್ಟೊಂದು ಸಚಿವ ಸ್ಥಾನ ನೀಡಬೇಕಾದ ಅಗತ್ಯ ಇರಲಿಲ್ಲ. ಜೆಡಿಎಸ್‌ ವರಿಷ್ಠ ನಡೆಯಿಂದ ಸಮಾಜಕ್ಕೆ ಬೇರೆಯದೆ ಸಂದೇಶ ರವಾನೆಯಾಗಿದೆ ಎಂದು ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಪಕ್ಷದಿಂದ 37 ಶಾಸಕರು ಗೆಲುವು ಸಾಧಿಸಿದ್ದು, ಬಿಎಸ್‌ಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ ಜೆಡಿಎಸ್‌ನ ದಲಿತ ಶಾಸಕರು ನಾಲ್ಕು ಸ್ಥಾನದಲ್ಲಿ ಜಯ ಗಳಿಸಿದ್ದಾರೆ. ಈ ನಾಲ್ವರಲ್ಲಿ ಒಬ್ಬರಿಗೂ ಅವಕಾಶ ನೀಡದಿರುವುದು ತೀವ್ರ ಬೇಸರಗೊಂಡಿದ್ದಾರೆ. ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್‌ ಸಚಿವ ಸ್ಥಾನ ಸಿಗದ ಕಾರಣ ಪಕ್ಷದ ಮುಖಂಡರ ಧೋರಣೆಯನ್ನು ಖಂಡಿಸಿ ಉಂಟಾಗಿರುವ ಪ್ರಹ ಸನವು ಜೆಡಿಎಸ್‌ನಲ್ಲಿ ಕೂಡ ಆದರೆ ಮಾತ್ರ ಬೆಲೆಯುಂಟಾ? ಎಂಬ ಪ್ರಶ್ನೆಗಳು ಅತೃಪ್ತರಲ್ಲಿ ಮೂಡಿದೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ವ್ಯಕ್ತವಾಗಿರುವಂತೆ ಜೆಡಿಎಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರೆ ಯಾವುದೇ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಸಚಿವ ಸ್ಥಾನ ವಂಚಿತರು ತಮ್ಮ ಬೇಸರವನ್ನು ತಮ್ಮೊಳಗೆ ಇಟ್ಟುಕೊಂಡು ಸಹಿಸಿಕೊಂಡಿದ್ದಾರೆ. ಅಲ್ಲದೇ, ಮುಂದಿನ ದಿನದಲ್ಲಿ ನಿಗಮ-ಮಂಡಳಿಯಲ್ಲಾದರೂ ವರಿಷ್ಠರು ಸ್ಥಾನ-ಮಾನ ನೀಡುವ ಭರವಸೆಯನ್ನು ಕೊಡುವರೇ ಎಂಬುದನ್ನು ನೋಡಿಕೊಂಡು ಮುಂದಿನ ಹಾದಿ ಹಿಡಿಯುವ ಆಲೋಚನೆಯಲ್ಲಿ ಜೆಡಿಎಸ್‌ನ ಅತೃಪ್ತರಿದ್ದಾರೆ ಎಂದು ಹೇಳಲಾಗಿದೆ.