ಬೆಂಗಳೂರು [ಆ.19]:  ಲೋಕಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರ ಸಾವಿರಾರು ಜನರ ದೂರವಾಣಿ ಕದ್ದಾಲಿಕೆ ಮಾಡಿರುವುದನ್ನು ಕೂಡ ಸಿಬಿಐ ತನಿಖೆಗೆ ವಹಿಸಲಿ ಎಂದು ಜೆಡಿಎಸ್‌ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಒತ್ತಾಯಿಸಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿರುವುದು ಸ್ವಾಗತಾರ್ಹ. ಹಾಗೆಯೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡ ಕದ್ದಾಲಿಕೆ ಮಾಡಿದೆ. ಇದನ್ನೂ ಕೂಡ ಸಿಬಿಐ ತನಿಖೆಗೆ ವಹಿಸಿದರೆ ಸ್ವಾಗತ ಮಾಡುತ್ತೇನೆ. ಈ ಬಗ್ಗೆ ಸಂಸತ್‌ನಲ್ಲಿ ಪ್ರಶ್ನೆ ಮಾಡುತ್ತೇನೆ ಎಂದರು.

ನಮ್ಮ ಸರ್ಕಾರದಲ್ಲಿ ದೂರವಾಣಿ ಕದ್ದಾಲಿಕೆ ಆಗಿದೆಯೂ ಇಲ್ಲವೋ ಗೊತ್ತಿಲ್ಲ. ಪೊಲೀಸರೊಬ್ಬರ ಆಡಿಯೋದಿಂದ ತನಿಖೆ ಮಾಡಿಸುತ್ತಿದ್ದಾರೆ. ತನಿಖೆ ಮುಗಿದ ಬಳಿಕ ಎಲ್ಲ ಗೊತ್ತಾಗಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಲವರ ಮೇಲೆ ಐದೈದು ನಿಮಿಷಕ್ಕೂ ದಾಳಿ ಮಾಡಿದ್ದರು. ಅವರೇನು ದೇವರಾ? ಅವರು ಯಾವ ಆಧಾರದ ಮೇಲೆ ದಾಳಿ ಮಾಡುತ್ತಿದ್ದರು? ಕೇಂದ್ರ ಸರ್ಕಾರ ಶೇ.100ರಷ್ಟುದೂರವಾಣಿ ಕದ್ದಾಲಿಕೆ ಮಾಡಿದೆ. 14 ತಿಂಗಳು ಸರ್ಕಾರ ಮಾಡೋಕೆ ಬಿಟ್ಟಿಲ್ಲ. ಯಾರನ್ನೂ ಧ್ವನಿ ಎತ್ತಲು ಬಿಟ್ಟಿಲ್ಲ. ಎಲ್ಲ ಫೋನ್‌ ಕದ್ದಾಲಿಕೆಗೆ ಸಿಬಿಐ ತನಿಖೆಯಾಗಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.