ಜೆಡಿಎಸ್‌ ಗೆದ್ದರೆ ಬಿಎಂಟಿಸಿ ಬಸ್‌ ಪ್ರಯಾಣ ಫ್ರೀ!

First Published 7, Apr 2018, 8:10 AM IST
JDS Give Big Offer
Highlights

ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಬಿಎಂಟಿಸಿ ಬಸ್ಸುಗಳ ಟಿಕೆಟ್‌ ದರ ರದ್ದುಪಡಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದು. ಜತೆಗೆ ಖಾಸಗಿ ಶಾಲೆಗಳ ಡೊನೇಶನ್‌ ಹಾವಳಿಗೆ ಬ್ರೇಕ್‌ ಹಾಕಲಾಗುವುದು ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ಹೇಳಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಬಿಎಂಟಿಸಿ ಬಸ್ಸುಗಳ ಟಿಕೆಟ್‌ ದರ ರದ್ದುಪಡಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುವುದು. ಜತೆಗೆ ಖಾಸಗಿ ಶಾಲೆಗಳ ಡೊನೇಶನ್‌ ಹಾವಳಿಗೆ ಬ್ರೇಕ್‌ ಹಾಕಲಾಗುವುದು ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ‘ನಾಗರೀಕ ಸಮಾಜ ವೇದಿಕೆ’ ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳ ಮುಖಂಡರೊಂದಿಗಿನ ಚುನಾವಣಾ ಪ್ರಣಾಳಿಕೆ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರ ಸಂಚಾರ ದಟ್ಟಣೆ ನಿವಾರಣೆ ನೆಪದಲ್ಲಿ ಮೆಟ್ರೋಗಾಗಿ 40 ಸಾವಿರ ಕೋಟಿ ರು. ಖರ್ಚು ಮಾಡಿದ್ದಾರೆ. ಆದರೆ, ಮೆಟ್ರೋದಿಂದ ಮಾತ್ರವೇ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾಧ್ಯವಿಲ್ಲ. ಬದಲಿಗೆ ಬಿಎಂಟಿಸಿ, ಮೆಟ್ರೋ, ಮೋನೋ ರೈಲು ಎಲ್ಲವೂ ಸದ್ಬಳಕೆಯಾಗಬೇಕು.ಅದೇ ರೀತಿ ಬಿಎಂಟಿಸಿ ಪ್ರತಿಯೊಬ್ಬರೂ ಬಳಸುವಂತೆ ಉತ್ತೇಜಿಸಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್‌ ಉಚಿತ ಸೇವೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಬಿಎಂಟಿಸಿಗೆ ಪ್ರಯಾಣಿಕರಿಂದ ಮಾತ್ರವಲ್ಲದೇ ಬೇರೆ ರೀತಿಯ ಆದಾಯ ಕೂಡ ಇದೆ. ಪ್ರಸ್ತುತ ನಗರದ ವಿವಿಧ ಕಡೆ ಬಿಎಂಟಿಸಿ ಹೊಂದಿರುವ ಆಸ್ತಿಗಳು ಹಾಗೂ ಕಟ್ಟಡಗಳನ್ನು ಕಡಿಮೆ ಮೊತ್ತಕ್ಕೆ ಬಾಡಿಗೆಗೆ ನೀಡಿದೆ. ಇದನ್ನು ಸೂಕ್ತವಾಗಿ ನಿರ್ವಹಿಸಿದರೆ ಪ್ರತಿ ವರ್ಷ ಒಂದು ಸಾವಿರ ಕೋಟಿ ಆದಾಯ ಬರುತ್ತದೆ. ಹೀಗಾಗಿ ನಮ್ಮ ಸರ್ಕಾರ ಬಂದರೆ ಟಿಕೆಟ್‌ ಪದ್ದತಿಯನ್ನು ರದ್ದುಗೊಳಿಸಲಾಗುವುದು ಎಂದರು.

ಪ್ರಸ್ತುತ ಬಸ್‌ ನಿರ್ವಾಹಕ ಟಿಕೆಟ್‌ ನೀಡಿ ಹಣ ಸಂಗ್ರಹಿಸುವುದು ವಾಡಿಕೆಯಲ್ಲಿದೆ. ಇದರ ಬದಲು ಬಿಎಂಟಿಸಿ ಬಸ್ಸುಗಳಲ್ಲಿ ಟಿಕೆಟ್‌ ಹೆಸರಿನಲ್ಲಿ ಹಣ ಸಂಗ್ರಹವೇ ಮಾಡಬಾರದು. ಈ ಕ್ರಾಂತಿಕಾರಿ ಪ್ರಸ್ತಾವನೆಯನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಇಟ್ಟಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ ಎಂದು ಸಿಂಧ್ಯಾ ಹೇಳಿದರು.

ಖಾಸಗಿ ಶಾಲೆಗಳು ಡೊನೇಶ್‌ಗಾಗಿ ಭಿಕ್ಷುಕರಾಗಿ ಬದಲಾಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಬಂದರೆ ಡೊನೇಶನ್‌ ರದ್ದು ಮಾಡಲು ಪ್ರಯತ್ನಿಸುತ್ತೇವೆ. ಜತೆಗೆ ಆಹಾರ ಪೋಲು ತಡೆಯಲು ಕಾನೂನು ತರಲಾಗುವುದು. ಜೆಡಿಎಸ್‌ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಮುಂದುವರೆಸುತ್ತೇವೆ. ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಿ 18 ಸಾವಿರ ಕನಿಷ್ಠ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಸ್ತುತ ಚುನಾವಣೆಯಲ್ಲಿ ಕೋಟಿಗಳಲ್ಲಿ ಮಾತನಾಡುವುದು ಜಾಸ್ತಿಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕಳೆದುಕೊಳ್ಳಲು ಶುರುವಾಗಿದೆ. ದುಡ್ಡು-ಜಾತಿ ಹಾಗೂ ತೋಳು ಬಲದ ಮೇಲೆ ಪ್ರಜಾಪ್ರಭುತ್ವ ನಲುಗಿದೆ. ಜನರ ಮುಂದೆ ನೀಡುವ ಆಯ್ಕೆಗಳು ಜಾತಿ, ಹಣ ಆಗಿಬಿಟ್ಟಿವೆ. ಅನುಕಂಪದ ಅಲೆಯಲ್ಲಿ ಗೆಲ್ಲುವಂತಹ ಪರಿಪಾಠವೂ ಬೆಳೆದಿದೆ. ಹೀಗಾಗಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೋಗುವಂತಾಗಿದೆ. ಯಾವ ಪಕ್ಷವೂ ಚುನಾವಣಾ ಆಯೋಗ ನಿಗದಿ ಮಾಡಿರುವ ನಿಗದಿತ ವೆಚ್ಚಕ್ಕಿಂತ ಕಡಿಮೆ ಹಣ ವೆಚ್ಚ ಮಾಡುವುದಿಲ್ಲ. ನಮ್ಮ ಪಕ್ಷವೂ ಇದಕ್ಕೆ ಹೊರತಾಗಿಲ್ಲ ಎಂದು ಅವರು ಹೇಳಿದರು.

ಸಿಪಿಐ(ಎಂ) ಮುಖಂಡ ನಾಗರಾಜು ಮಾತನಾಡಿ, ರಾಜ್ಯದಲ್ಲಿ ಜಾತ್ಯತೀತತೆ ಉಳಿಸಿಕೊಂಡು ಕೋಮುವಾದ ವಿರುದ್ಧ ಹೋರಾಡಬೇಕಾಗಿದೆ. ಹೀಗಾಗಿ ಪ್ರತಿಯೊಂದು ಪಕ್ಷದ ಪ್ರಣಾಳಿಕೆಯಲ್ಲೂ ಇದು ಪ್ರಮುಖ ವಿಷಯವಾಗಬೇಕು ಎಂದು ಅಭಿಪ್ರಾಯಪಟ್ಟರು. ಪ್ರೊ.ಬಾಬು ಮ್ಯಾಥ್ಯೂ, ನಗರಾಭಿವೃದ್ಧಿ ತಜ್ಞ ಅಶ್ವಿನ್‌ ಮಹೇಶ್‌, ನಾಗರೀಕ ಸಮಾಜ ವೇದಿಕೆಯ ಕಾತ್ಯಾಯನಿ ಚಾಮರಾಜ್‌ ಸೇರಿ ಹಲವರು ಹಾಜರಿದ್ದರು.

loader