Asianet Suvarna News Asianet Suvarna News

ಯೋಗೇಶ್ವರ್ ಮಣಿಸಲು ಕಾಂಗ್ರೆಸ್ – ಜೆಡಿಎಸ್ ದೋಸ್ತಿ..?

ಕುತೂ​ಹ​ಲ​ಕಾರಿ ಬೆಳ​ವ​ಣಿ​ಗೆ​ಯೊಂದ​ರಲ್ಲಿ ರಾಮನಗರ ಜಿಲ್ಲೆ ಚನ್ನ​ಪ​ಟ್ಟಣ ವಿಧಾ​ನ​ಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆ​ಟ್‌ಗೆ ಈಗ ಇಂಧನ ಸಚಿವ ಡಿ.ಕೆ. ಶಿವ​ಕು​ಮಾರ್‌ ಅವರ ತಂಗಿ ಗಂಡ ಶರಶ್ಚಂದ್ರ ಅವರು ಅಧಿ​ಕೃ​ತ​ವಾಗಿ ಆಕಾಂಕ್ಷಿ​ಯಾ​ಗಿ​ದ್ದಾ​ರೆ. 

JDS Congress May Alliance In Ramanagara

ಬೆಂಗ​ಳೂ​ರು : ಕುತೂ​ಹ​ಲ​ಕಾರಿ ಬೆಳ​ವ​ಣಿ​ಗೆ​ಯೊಂದ​ರಲ್ಲಿ ರಾಮನಗರ ಜಿಲ್ಲೆ ಚನ್ನ​ಪ​ಟ್ಟಣ ವಿಧಾ​ನ​ಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆ​ಟ್‌ಗೆ ಈಗ ಇಂಧನ ಸಚಿವ ಡಿ.ಕೆ. ಶಿವ​ಕು​ಮಾರ್‌ ಅವರ ತಂಗಿ ಗಂಡ ಶರಶ್ಚಂದ್ರ ಅವರು ಅಧಿ​ಕೃ​ತ​ವಾಗಿ ಆಕಾಂಕ್ಷಿ​ಯಾ​ಗಿ​ದ್ದಾ​ರೆ. ಗುರು​ವಾರ ಕೆಪಿ​ಸಿಸಿ ಕಚೇ​ರಿಗೆ ತೆರ​ಳಿದ ಶರ​ಶ್ಚಂದ್ರ ಅವರು ಚನ್ನ​ಪ​ಟ್ಟಣ ಕ್ಷೇತ್ರದ ಟಿಕೆ​ಟ್‌​ಗಾಗಿ ಅರ್ಜಿ​ಯನ್ನು ಖರೀದಿ ಮಾಡಿ​ದರು. ತನ್ಮೂ​ಲಕ ಸ್ಟಾರ್‌ ಕ್ಷೇತ್ರ​ವೆ​ನಿ​ಸಿದ ಚನ್ನ​ಪ​ಟ್ಟ​ಣ​ದಿಂದ ಶಿವ​ಕು​ಮಾರ್‌ ಅವರು ಕುಟುಂಬದ ಸದ​ಸ್ಯರೇ ಕಾಂಗ್ರೆ​ಸ್‌​ನಿಂದ ಕಣಕ್ಕಿಳಿ​ಯುವ ಸಾಧ್ಯತೆ ಮೂಡಿದೆ.

ಕಾಂಗ್ರೆ​ಸ್‌ಗೆ ಕಡೆ ಕ್ಷಣ​ದಲ್ಲಿ ಕೈಕೊಟ್ಟು ಬಿಜೆಪಿ ಸೇರಿದ ಹಾಲಿ ಶಾಸಕ ಸಿ.ಪಿ.ಯೋಗೇ​ಶ್ವರ್‌ ವಿರುದ್ಧ ಶರಶ್ಚಂದ್ರ ಅವರನ್ನು ಕಣಕ್ಕೆ ಇಳಿ​ಸಲು ತಯಾರಿ ನಡೆ​ಸಿದೆ ಎಂದು ‘ಕನ್ನಡಪ್ರಭ’ ಈ ಹಿಂದೆ ವರದಿ ಮಾಡಿತ್ತು. ಇದಾದ ನಂತರ ಚನ್ನ​ಪ​ಟ್ಟ​ಣದ ಸ್ಥಳೀಯ ಮುಖಂಡರು ಹಾಗೂ ಕಾರ್ಯ​ಕ​ರ್ತರು ಶಿವ​ಕು​ಮಾರ್‌ ಅವರ ಸಹೋ​ದರ ಹಾಗೂ ಸಂಸದ ಡಿ.ಕೆ. ಸುರೇಶ್‌ ಅವ​ರನ್ನು ಕ್ಷೇತ್ರ​ದಿಂದ ಕಣಕ್ಕೆ ಇಳಿ​ಸ​ಬೇಕು ಎಂದು ಒತ್ತಾ​ಯಿ​ಸಿ​ದ್ದರು. ಹೀಗಾಗಿ ಕೆಲ ಕಾಲ ಸುರೇಶ್‌ ಅವರು ಈ ಕ್ಷೇತ್ರ​ದಿಂದ ಸ್ಪರ್ಧಿ​ಸ​ಲಿ​ದ್ದಾರೆ ಎಂದು ಹೇಳ​ಲಾ​ಗು​ತ್ತಿ​ತ್ತು.

ಈ ನಡುವೆ ಜೆಡಿ​ಎ​ಸ್‌​ನಿಂದ ಆ ಪಕ್ಷದ ರಾಜ್ಯಾ​ಧ್ಯಕ್ಷ ಎಚ್‌.ಡಿ. ಕುಮಾ​ರ​ಸ್ವಾಮಿ ಅವರ ಪತ್ನಿ ಅನಿತಾ ಕುಮಾ​ರ​ಸ್ವಾಮಿ ಅವರು ಕಣಕ್ಕೆ ಇಳಿ​ಯುವ ಸಾಧ್ಯ​ತೆಯ ವದಂತಿ ಹಬ್ಬಿತ್ತು. ಈ ಹಂತ​ದಲ್ಲಿ ಡಿ.ಕೆ. ಶಿವ​ಕು​ಮಾರ್‌ ಅವರು ಕಾರ್ಯ​ಕ್ರ​ಮ​ವೊಂದ​ರಲ್ಲಿ ಅನಿತಾ ಕುಮಾ​ರ​ಸ್ವಾಮಿ ಅವ​ರೊಂದಿಗೆ ಪಾಲ್ಗೊಂಡು ಚರ್ಚೆ ನಡೆ​ಸಿದ್ದು ಸಾಕಷ್ಟುಸುದ್ದಿ​ಯಾ​ಗಿತ್ತು. ಚನ್ನ​ಪ​ಟ್ಟ​ಣ​ದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿ​ಎ​ಸ್‌ಗೆ ಸಮಾ​ನ​ವೈರಿ ಎನಿ​ಸಿದ ಯೋಗೇ​ಶ್ವರ್‌ ಅವ​ರನ್ನು ಮಣಿ​ಸಲು ಕಾಂಗ್ರೆಸ್‌ ಹಾಗೂ ಜೆಡಿ​ಎಸ್‌ ಒಳ ಒಪ್ಪಂದ ಮಾಡಿ​ಕೊ​ಳ್ಳ​ಲಿದ್ದು, ಜೆಡಿ​ಎಸ್‌ ಅನಿತಾ ಕುಮಾ​ರ​ಸ್ವಾಮಿ ಅವ​ರನ್ನೇ ಕಣಕ್ಕೆ ಇಳಿ​ಸಿ​ದರೆ, ಅವರ ಗೆಲು​ವಿಗೆ ಸಹ​ಕಾ​ರಿ​ಯಾ​ಗು​ವಂತೆ ದುರ್ಬಲ ಅಭ್ಯ​ರ್ಥಿ​ಯನ್ನು ಕಾಂಗ್ರೆಸ್‌ ಕಣಕ್ಕೆ ಇಳಿ​ಸುವ ಸಾಧ್ಯ​ತೆ​ಯ ಲೆಕ್ಕಾ​ಚಾರ ಆರಂಭ​ವಾ​ಗಿ​ದ್ದ​ವು.

ಆದರೆ, ಶರ​ಶ್ಚಂದ್ರ ಅವರು ಚನ್ನ​ಪ​ಟ್ಟಣ ಕ್ಷೇತ್ರದ ಟಿಕೆಟ್‌ ಅರ್ಜಿ ಪಡೆ​ದು​ಕೊ​ಳ್ಳು​ವು​ದ​ರೊಂದಿಗೆ ಕಾಂಗ್ರೆಸ್‌ ಈ ಕ್ಷೇತ್ರ​ದಲ್ಲಿ ಪ್ರಬಲ ಪೈಪೋಟಿ ನಡೆ​ಸಲು ತೀರ್ಮಾ​ನಿ​ಸಿ​ದಂತಿದೆ ಎಂದೇ ರಾಜ​ಕೀಯ ವಲ​ಯ​ದಲ್ಲಿ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿದೆ. ತಮ್ಮ ಕುಟುಂಬದ ಸದ​ಸ್ಯ​ರನ್ನು ಶಿವ​ಕು​ಮಾರ್‌ ಕಣಕ್ಕೆ ಇಳಿ​ಸು​ವು​ದ​ರಿಂದ ಅವರ ಗೆಲು​ವಿಗೆ ಗಂಭೀರ ಪ್ರಯತ್ನ ನಡೆ​ಸ​ಲಿ​ದ್ದಾರೆ ಎಂದೇ ಹೇಳ​ಲಾ​ಗು​ತ್ತಿದೆ.

ಕಾಂಗ್ರೆ​ಸ್‌​ನಲ್ಲಿ ನಡೆ​ದಿ​ರುವ ಮತ್ತೊಂದು ಕುತೂ​ಹ​ಲ​ಕಾರಿ ಚರ್ಚೆ​ಯೆಂದರೆ ಜೆಡಿ​ಎಸ್‌ನಲ್ಲಿ ವರಿಷ್ಠ ಎಚ್‌.ಡಿ. ದೇವೇ​ಗೌಡ ಕುಟುಂಬ​ದ ಆಂತ​ರಿಕ ಸಂಘ​ರ್ಷದ ಪರಿ​ಣಾ​ಮ​ವಾಗಿ ಕುಟುಂಬದ ಇಬ್ಬರು ಮಾತ್ರ ಸ್ಪರ್ಧಿ​ಸ​ಬೇಕು ಎಂಬ ನಿಲು​ವಿಗೆ ಬಂದರೆ ಆಗ ಅನಿತಾ ಕುಮಾ​ರ​ಸ್ವಾಮಿ ಅವರು ಚನ್ನ​ಪ​ಟ್ಟ​ಣ​ದಿಂದ ಕಣಕ್ಕೆ ಇಳಿ​ಯುವುದಿಲ್ಲ. ಇನ್ನು ಸಮಾನ ಶತ್ರು ಯೋಗೇ​ಶ್ವರ್‌ ಮಣಿ​ಸುವ ಉದ್ದೇ​ಶದಿಂದ ಕಾಂಗ್ರೆ​ಸ್‌ನ ಶರ​ಶ್ಚಂದ್ರ ಅವ​ರಿಗೆ ಜೆಡಿ​ಎಸ್‌ ಬೆಂಬಲ ನೀಡು​ತ್ತದೆಯೇ ಎಂಬು​ದು ಪ್ರಶ್ನೆ. ಇದು ನಿಜ​ವಾ​ಗು​ವುದೇ ಎಂಬುದನ್ನು ಕಾದು​ ನೋ​ಡ​ಬೇ​ಕು.

ಖಾನಾಪುರದಿಂದ ನಿಂಬಾ​ಳ್ಕರ್‌ ಪತ್ನಿ ಅರ್ಜಿ:

ಉಳಿ​ದಂತೆ, ಗುರು​ವಾ​ರ​ದಂದು ಐಜಿಪಿ (ಸಿ​ಐ​ಡಿ) ಹೇಮಂತ್‌ ನಿಂಬಾ​ಳ್ಕರ್‌ ಅವರ ಪತ್ನಿ ಡಾ. ಅಂಜಲಿ ನಿಂಬಾ​ಳ್ಕರ್‌ ಅವರು ಬೆಳ​ಗಾವಿ ಜಿಲ್ಲೆಯ ಖಾನಾ​ಪುರ ವಿಧಾ​ನ​ಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ​ಯನ್ನು ಪಡೆ​ದು​ಕೊಂಡಿ​ದ್ದಾ​ರೆ. ಇದೇ ಕ್ಷೇತ್ರ​ದಿಂದ ಕಳೆದ ಬಾರಿ ಪಕ್ಷೇ​ತ​ರ​ರಾಗಿ ಸ್ಪರ್ಧಿಸಿ ಪರಾ​ಜಿ​ತ​ರಾ​ಗಿದ್ದ ಅಂಜ​ಲಿ ನಿಂಬಾ​ಳ್ಕರ್‌ ಅವ​ರಿಗೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಕೊಡಿ​ಸುವಲ್ಲಿ ಐಜಿಪಿ ಹೇಮಂತ್‌ ನಿಂಬಾ​ಳ್ಕರ್‌ ಅವ​ರು ಪ್ರಭಾವ ಕೆಲಸ ಮಾಡಿದೆ. ಹೀಗಾಗಿಯೇ ಅವರು ಅರ್ಜಿ ಪಡೆ​ದು​ಕೊಂಡಿ​ದ್ದಾರೆ ಎಂದು ಮೂಲ​ಗಳು ಹೇಳಿ​ವೆ.

ಬಿಜೆಪಿ ರಾಜ್ಯಾ​ಧ್ಯಕ್ಷ ಬಿ.ಎಸ್‌. ಯಡಿ​ಯೂ​ರಪ್ಪ ಅವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ರಾಜ್ಯ ಸರ್ಕಾರಿ ಅಭಿ​ಯೋ​ಜ​ಕ​ರಾ​ಗಿದ್ದ ಚಂದ್ರ​ಮೌಳಿ ಅವರು ಮಡಿ​ಕೇರಿ ಕ್ಷೇತ್ರದ ಟಿಕೆ​ಟ್‌​ಗಾಗಿ ಅರ್ಜಿ ಪಡೆ​ದು​ಕೊಂಡಿ​ದ್ದಾರೆ. ಚಂದ್ರ​ಮೌಳಿ ಅವರು ಕಳೆದ ಬಾರಿ​ ಕೂಡ ಕಾಂಗ್ರೆಸ್‌ ಪಕ್ಷದ ಅಭ್ಯ​ರ್ಥಿ​ಯಾ​ಗಿ​ದ್ದರು.

ಹಾಲಿ ಕಾಂಗ್ರೆಸ್‌ ಶಾಸ​ಕ​ರಿ​ರುವ ಕ್ಷೇತ್ರ​ಗ​ಳಲ್ಲೂ ಆಕಾಂಕ್ಷಿ​ಗಳು ಅರ್ಜಿ ಪಡೆ​ದು​ಕೊ​ಳ್ಳು​ತ್ತಿ​ರುವ ಬೆಳ​ವ​ಣಿ​ಗೆಯೂ ನಡೆ​ದಿದೆ. ವಿಶೇ​ಷ​ವೆಂದರೆ, ಬಳ್ಳಾರಿ ನಗರ ಕ್ಷೇತ್ರ​ದಲ್ಲಿ ಕಾಂಗ್ರೆ​ಸ್‌ನ ಪ್ರಭಾವಿ ಅನಿಲ್‌ ಲಾಡ್‌ ಅವರು ಶಾಸ​ಕ​ರಾ​ಗಿ​ದ್ದರೆ, ಆ ಕ್ಷೇತ್ರಕ್ಕೆ ಇದು​ವ​ರೆಗೂ 8 ಮಂದಿ ಅರ್ಜಿ ಪಡೆ​ದು​ಕೊಂಡಿ​ದ್ದಾರೆ. ಅದೇ ರೀತಿ ತಮ್ಮ ಪುತ್ರನ ಮೊಹ​ಮ್ಮದ್‌ ನಲ​ಪಾಡ್‌ ಉದ್ಯಮಿ ಪುತ್ರ​ನಿಗೆ ಹಲ್ಲೆ ನಡೆ​ಸಿದ ಪ್ರಕ​ರ​ಣ​ದಿಂದ ಕಳೆ​ಗುಂದಿ​ರುವ ಎನ್‌.ಎ. ಹ್ಯಾರಿಸ್‌ ಅವರ ಶಾಂತಿ​ನ​ಗರ ಕ್ಷೇತ್ರ​ದಿಂದ ಶಂಕರ್‌ ಹಾಗೂ ರಾಬ​ರ್ಟ್‌ ಎಂಬು​ವರು ಅರ್ಜಿ ಪಡೆ​ದು​ಕೊಂಡಿ​ದ್ದಾ​ರೆ. ಇನ್ನು ಪುತ್ತೂರು ಕ್ಷೇತ್ರದ ಟಿಕೆ​ಟ್‌​ಗಾಗಿ ಶಕುಂತಲಾ ಶೆಟ್ಟಿಅರ್ಜಿ ಪಡೆ​ದು​ಕೊಂಡಿ​ದ್ದಾ​ರೆ.

Follow Us:
Download App:
  • android
  • ios