Asianet Suvarna News Asianet Suvarna News

ಮಾಜಿ ಸಿಎಂ - ಹಾಲಿ ಸಿಎಂ ಸೀಕ್ರೇಟ್ ಚರ್ಚೆ : ಬಿಗ್ ಆಪರೇಷನ್ ಪ್ಲಾನ್

ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ - ಜೆಡಿಎಸ್ ಮುಖಂಡರು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. 

JDS Congress Leaders Meet To Counter Strategy For BJP
Author
Bengaluru, First Published Sep 22, 2018, 7:29 AM IST
  • Facebook
  • Twitter
  • Whatsapp

ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯು ಕೈಹಾಕಿರುವ ಆಪರೇಷನ್‌ ಕಮಲಕ್ಕೆ ಪ್ರತಿತಂತ್ರ ರೂಪಿಸಲು ಜೆಡಿಎಸ್‌-ಕಾಂಗ್ರೆಸ್‌ ಮುಖಂಡರು ಮಹತ್ವದ ಸಭೆ ನಡೆಸಿದ್ದು, ಕಾಂಗ್ರೆಸ್‌ನಲ್ಲಿನ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.

ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ನಿವಾಸಕ್ಕೆ ದೌಡಾಯಿಸಿದರು. ಅಲ್ಲಿ ಆಪರೇಷನ್‌ ಕಮಲದ ವಿರುದ್ಧ ರಣತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಯಿತು.

ಈ ವೇಳೆ ಡಿ.ಕೆ.ಶಿವಕುಮಾರ್‌ ಸೇರಿ ಕೆಲವರು ಬಿಜೆಪಿಯು ಆಪರೇಷನ್‌ ಕಮಲಕ್ಕೆ ಮುಂದಾಗಿದೆ. ಅದೇ ರೀತಿ ನಾವೂ ಕೂಡ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಬಹುದು ಎಂದು ಉತ್ಸಾಹ ತೋರಿದರು. ಆದರೆ, ಸಿದ್ದರಾಮಯ್ಯ ಅವರು ಈ ಹಂತದಲ್ಲಿ ಬಿಜೆಪಿ ಶಾಸಕರಿಗೆ ಕೈಹಾಕುವುದು ಸರಿಯಲ್ಲ. ಮೊದಲು ಆಪರೇಷನ್‌ ಕಮಲಕ್ಕೆ ಸಿಲುಕಿರುವ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ನಮ್ಮೊಂದಿಗೆ ಇಟ್ಟುಕೊಳ್ಳಲು ಯತ್ನಿಸೋಣ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿಗೆ ಅಗತ್ಯವಿರುವಷ್ಟುಸಂಖ್ಯೆಯಲ್ಲಿ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ಗೆ ಈಡುಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಕಪಿಮುಷ್ಟಿಗೆ ಸಿಲುಕಿರುವವರನ್ನು ಮತ್ತೆ ನಮ್ಮೊಂದಿಗೆ ಬರುವಂತೆ ಮಾಡೋಣ. ಒಂದು ವೇಳೆ ಅನಿವಾರ್ಯವೆನಿಸಿದರೆ ಹಾಗೂ ಸರ್ಕಾರ ಬಿದ್ದೇ ಹೋಗುತ್ತದೆ ಎನ್ನುವ ಪರಿಸ್ಥಿತಿ ಬಂದರೆ ಆಗ ಆಪರೇಷನ್‌ ಹಸ್ತ ಅಥವಾ ಆಪರೇಷನ್‌ ದಳ ಮಾಡಬಹುದು. ಈಗ ಅಂತಹ ಪರಿಸ್ಥಿತಿ ಬಂದಿಲ್ಲ. ಆತುರಪಡುವುದು ಬೇಡ ಎಂದು ತಿಳಿಸಿದರು ಎನ್ನಲಾಗಿದೆ.

ಈ ವೇಳೆ ಡಿ.ಕೆ. ಶಿವಕುಮಾರ್‌, ಬಿಜೆಪಿಯವರು ತನ್ನತ್ತ ಸೆಳೆಯಲು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌ ಶಾಸಕರ ಪಟ್ಟಿಯನ್ನೇ ಸಭೆಯ ಮುಂದಿಟ್ಟರು ಎನ್ನಲಾಗಿದೆ. ಅಲ್ಲದೆ, ಶಾಸಕರಿಗೆ ಬಿಜೆಪಿ ಒಡ್ಡಿರುವ ಆಮಿಷಗಳೇನು? ಆಮಿಷವೊಡ್ಡಿದ್ದು ಯಾರು? ಇದಕ್ಕೆ ಶಾಸಕರು ನೀಡಿರುವ ಪ್ರತಿಕ್ರಿಯೆ ಏನು ಎಂಬಿತ್ಯಾದಿ ಸಂಪೂರ್ಣ ವಿವರಗಳನ್ನು ಸಭೆಗೆ ಒದಗಿಸಿದರು.

ಅಲ್ಲದೆ, ಬಿಜೆಪಿಯ ಆಮಿಷಕ್ಕೆ ಸಿಲುಕಿ ಪಕ್ಷ ತ್ಯಜಿಸುವ ಸಂಭಾವ್ಯತೆ ಇರುವ ಶಾಸಕರ ಪಟ್ಟಿಯನ್ನು ಸಭೆಗೆ ನೀಡಿದರು ಎನ್ನಲಾಗಿದೆ. ಈ ಪಟ್ಟಿಯಲ್ಲಿರುವವರ ಪೈಕಿ ಮೂರು ನಾಲ್ಕು ಜನರಿಗೆ ಆ ಕ್ಷಣದಲ್ಲೇ ಸಿದ್ದರಾಮಯ್ಯ ಅವರು ಕರೆ ಮಾಡಿ ಮಾತನಾಡಿದ್ದು, ಯಾವ ಕಾರಣಕ್ಕೂ ಪಕ್ಷ ತ್ಯಜಿಸದಂತೆ ಮನವೊಲಿಸಲು ಯತ್ನಿಸಿದರು ಎನ್ನಲಾಗಿದೆ. ಈ ಶಾಸಕರು ದೂರವಾಣಿಯಲ್ಲಿ ಹೇಳಿದ ವಿವರಗಳಿಗೂ ಹಾಗೂ ಶಿವಕುಮಾರ್‌ ನೀಡಿದ ಮಾಹಿತಿಗೂ ಹೋಲಿಕೆ ಕಂಡುಬಂದಿದೆ ಎನ್ನಲಾಗಿದ್ದು, ಈ ಶಾಸಕರನ್ನು ಕೂಡಲೇ ಬಂದು ತಮ್ಮನ್ನು ಕಾಣುವಂತೆಯೂ ಸಿದ್ದರಾಮಯ್ಯ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ಸಹ ಅನಗತ್ಯ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬೇಡಿ. ಸರ್ಕಾರ ಪತನಗೊಳ್ಳುವಷ್ಟುಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಹೀಗಾಗಿ ಆತಂಕ ಪಡದೆ ಎರಡೂ ಪಕ್ಷಗಳಿಗೂ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ. ಅತೃಪ್ತ ಶಾಸಕರ ಬಗ್ಗೆ ವಿಶೇಷ ಗಮನ ಹರಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios