ಹರಪನಹಳ್ಳಿ  :  ‘ಅನೇಕ ಶಾಸಕರು ಕಾಲಿಗೆ ಬಿದ್ದು ಕಾಂಗ್ರೆಸ್‌ ಬೇಡ, ಜೆಡಿಎಸ್‌ ಬೇಡ, ಬಿಜೆಪಿ ಕಡೆ ಬರುತ್ತೇವೆ ಎಂದರೆ ಬೇಡ ಅನ್ನೋಕಾಗುತ್ತಾ?’ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಅವರ ಪಕ್ಷದಿಂದ ಬೇಸತ್ತಿದ್ದಾರೆ. ಅವರಾಗಿಯೇ ಬಿಜೆಪಿ ಬಳಿ ಬರುತ್ತೇವೆ ಎನ್ನುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರನ್ನು ಬೇಡ ಅನ್ನಲಿಕ್ಕಾಗುತ್ತಾ ಎಂದು ಈಶ್ವರಪ್ಪ ಹೇಳಿದರು.

ಸಮ್ಮಿಶ್ರ ಸರ್ಕಾರ ಜೆಡಿಎಸ್‌ ಮತ್ತು ಕಾಂಗ್ರೆಸ್‌ನೊಳಗಿನ ಗುಂಪುಗಾರಿಕೆಯಿಂದ ಬಿದ್ದುಹೋಗುತ್ತದೆಯೇ ಹೊರತು ನಮ್ಮಿಂದಲ್ಲ. ದುಡ್ಡು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ, ವರ್ಗಾವಣೆಯಲ್ಲಿ ಲೂಟಿ ಮಾಡಿದ ಹಣದ ಪಾಲಿನ ವಿಚಾರದಲ್ಲಿ ಹೊಡೆದಾಟ, ಅಧಿಕಾರದ ಲಾಲಸೆ ಹಾಗೂ ಎಲ್ಲರಿಗೂ ಮಂತ್ರಿಯಾಗಬೇಕೆಂಬ ಅಭಿಲಾಷೆಯಿಂದಾಗಿ ಗುಂಪುಗಾರಿಕೆ ಶುರುವಾಗಿದೆ. ಇದೇ ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಬೇಕಾಗಿದೆ. ಆದ್ದರಿಂದ ಜೆಡಿಎಸ್‌, ಕಾಂಗ್ರೆಸ್‌ನ ಶಾಸಕರು ಬಿಜೆಪಿ ಕಡೆ ಬರಲು ಆಸಕ್ತಿ ತೋರಿದ್ದಾರೆ ಅಷ್ಟೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳೇ ಗೂಂಡಾಗಿರಿ ಮಾಡುತ್ತಿದ್ದಾರೆ. ಎಚ್‌ಡಿಕೆ ಅವರಂತೆ ‘ದಂಗೆ ಏಳಿ’ ಎಂದು ರಾಜ್ಯದ ಜನರಿಗೆ ಕರೆ ನೀಡಿರುವ ಮುಖ್ಯಮಂತ್ರಿಯನ್ನು ನಾನು ಈವರೆಗೂ ನೋಡಿಯೇ ಇಲ್ಲ. ಸಿನಿಮಾದಲ್ಲಿ ವಿಲನ್‌ ಮಾತ್ರ ಆ ರೀತಿ ಹೇಳುತ್ತಾರೆ ಎಂದರು.