ಎಐಎಡಿಎಂಕೆ ನಾಯಕಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪುತ್ರಿ ತಾವು ಎಂದು ಈ ಹಿಂದೆ ಅಮೃತಾ ಎಂಬಾಕೆ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅವರು ಎಂದಿಗೂ ಗರ್ಭಿಣಿ ಆಗಿರಲಿಲ್ಲ ಎಂದು ಇದೀಗ ತಮಿಳುನಾಡು ಸರ್ಕಾರ ಮದ್ರಾಸ್  ಹೈ ಕೋರ್ಟ್ ಗೆ ಮಾಹಿತಿ ನೀಡಿದೆ.

ಚೆನ್ನೈ: ಎಐಎಡಿಎಂಕೆ ನಾಯಕಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ತಮ್ಮ ಜೀವನದಲ್ಲಿ ಯಾವತ್ತೂ ಗರ್ಭಿಣಿಯಾಗಿರಲಿಲ್ಲ ಎಂದು ಅಲ್ಲಿನ ರಾಜ್ಯ ಸರ್ಕಾರ ಮದ್ರಾಸ್ ಹೈ ಕೋರ್ಟ್‌ಗೆ ಮಾಹಿತಿ ನೀಡಿದೆ. ಬೆಂಗಳೂರು ಮೂಲದ ಅಮೃತಾ ಎಂಬಾಕೆ ತಾನು ಜಯಲಲಿತಾ ಮಗಳು ಎಂದು ಪ್ರತಿಪಾದಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ರಾಜ್ಯ ಸರ್ಕಾರ, ನ್ಯಾ. ಎಸ್.ವೈದ್ಯನಾಥನ್ ನ್ಯಾಯಪೀಠಕ್ಕೆ ಈ ಪ್ರತಿಕ್ರಿಯೆ ಸಲ್ಲಿಸಿದೆ.

ಇದೇ ವೇಳೆ ಜಯಲಲಿತಾರ 1980 ರ ವೀಡಿಯೊ ಕ್ಲಿಪ್ ಗಳನ್ನು ಕೋರ್ಟ್‌ಗೆ ಸಲ್ಲಿಸಿ, ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಈ ಹೇಳಿಕೆ ದಾಖಲಿಸಿದ್ದಾರೆ. ಜಯಾ ಆಸ್ತಿಯನ್ನು ಪಡೆದುಕೊಳ್ಳುವುದೇ ಅರ್ಜಿದಾರರ ಉದ್ದೇಶವಾಗಿದೆ. ಒಂದು ವೇಳೆ ಆಕೆ ಮಗಳೇ ಆಗಿದ್ದರೆ, ಯಾಕೆ ಅವರು ಜಯಾ ಜೊತೆ ಯಾವತ್ತೂ ಫೋಟೋ ತೆಗೆಸಿಕೊಂಡಿಲ್ಲ ಎಂದು ವಿಜಯ್ ಪ್ರಶ್ನಿಸಿದ್ದಾರೆ.

ದಾಖಲೆಗಳ ಪ್ರಕಾರ ಅಮೃತಾ 1980 ರ ಆಗಸ್ಟ್‌ನಲ್ಲಿ ಜನಿಸಿದ್ದಾರೆ ಎನ್ನಲಾಗಿದೆ. ಕೋರ್ಟ್‌ಗೆ ಸಲ್ಲಿಸಿರುವ ವೀಡಿಯೊ 1980 ರ ಪ್ರಶಸ್ತಿ ಪ್ರದಾನ ಸಮಾರಂಭದ್ದು. ಅದು ಅಮೃತಾ ಹುಟ್ಟುವುದಕ್ಕೂ ತಿಂಗಳು ಮೊದಲು ತೆಗೆದ ವೀಡಿಯೊ. ಅದರಲ್ಲಿ ಜಯಲಲಿತಾ ಗರ್ಭಿಣಿಯಾಗಿರುವ ಯಾವುದೇ ಲಕ್ಷಣವಿಲ್ಲ ಎಂದು ವಿಜಯ್ ವಾದ ಮಂಡಿಸಿದ್ದಾರೆ. ಅಗತ್ಯಬಿದ್ದಲ್ಲಿ, ಜಯಾಲಲಿತಾರ ಇತರ ಸಂಬಂಧಿಗಳು, ಅಮೃತಾರ ಡಿಎನ್‌ಎ ಮಾದರಿ ಪರೀಕ್ಷಿಸಬಹುದು ಎಂದು ಹೇಳಿದ್ದಾರೆ. 

ಪ್ರಕರಣ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ. ತಾವು ಜಯಲಲಿತಾರ ಪುತ್ರಿ. ಬ್ರಾಹ್ಮಣ ವಂಶಸ್ಥೆಯಾದ ತಮ್ಮ ತಾಯಿಯನ್ನು ಆಚರಣೆ ಇಲ್ಲದೇ ಅಂತ್ಯಸಂಸ್ಕಾರ ಮಾಡಲಾಗಿದೆ. ಹೀಗಾಗಿ ಚೆನ್ನೈನಲ್ಲಿ ನಿರ್ಮಿಸಿರುವ ಸಮಾಧಿಯಿಂದ ಜಯಾರ ಕಳೇಬರವನ್ನು ಹೊರತೆಗೆದು, ಮತ್ತೆ ಅದನ್ನು ಸಂಪ್ರದಾಯಬದ್ಧವಾಗಿ ಅಂತ್ಯಸಂಸ್ಕಾರ ಮಾಡಲು ಅವಕಾಶ ಕೊಡಬೇಕು. ತಾವು ಜಯಾ ಪುತ್ರಿ ಎಂಬುದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಅಮೃತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.