ಪಕ್ಷವನ್ನು ದೇಶದಲ್ಲೇ ಮೂರನೇ ಶಕ್ತಿಯಾಗಿ ಬೆಳೆಸಬೇಕು ಎಂಬ ಹಂಬಲ ಇತ್ತು. ಆದರೆ ಪಕ್ಷದಲ್ಲೇ ಆದರ ಕೆಲವು ಬದಲಾವಣೆ ಮತ್ತು ಅವರ ಆರೋಗ್ಯ ಸ್ಥಿತಿ ಸಹಕರಿಸಲಿಲ್ಲ. ಇದರಿಂದ ಅವರು ಕೊಂಚ ಬೇಸರಕ್ಕೊಳಗಾಗಿದ್ದರು.- ಕೃಷ್ಣಂರಾಜು, ಎಐಎಡಿಎಂಕೆ ಹಿರಿಯ ಕಾರ್ಯದರ್ಶಿ ಹಾಗೂ ಜಯಲಲಿತಾ ಅವರ ಸಮೀಪವರ್ತಿಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಪರ ಜಯಲಲಿತಾ ಅವರ ನಿಷ್ಠೆ ಅಪಾರವಾಗಿತ್ತು. ವಾಜಪೇಯಿ ಪ್ರಧಾನಿಯಾಗಿದ್ದಾಗ ಸದನದಲ್ಲಿ ಹಲವು ಬಾರಿ ಗಲಾಟೆ ಮಾಡಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದರು. ಮಂಡ್ಯ ಜಿಲ್ಲೆಯವನಾಗಿ ನಾನು ಅವರಿಗೆ ವಿಶೇಷ ಗೌರವ ಸಲ್ಲಿಸುತ್ತಿದ್ದೆ.- ಎಸ್‌.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿಮೂಲತಃ ಕರ್ನಾಟಕದವರಾದ ಜೆ. ಜಯಲಲಿತಾ ಅವರ ನಿಧನದಿಂದ ತಮಿಳುನಾಡಿಗೆ, ಎಐಡಿಎಂಕೆಗೆ ಹಾಗೂ ಸಿನಿಮಾ ರಂಗಕ್ಕೂ ತುಂಬಲಾರದ ನಷ್ಟವುಂಟಾಗಿದೆ. ರಾಜ್ಯದಲ್ಲಿ ಜಯಲಲಿತಾ ಅವರ ಗೌರವಾರ್ಥ ಒಂದು ದಿನ ಶೋಕಾಚರಣೆ ಆಚರಿಸಲಾಗುವುದು. - ಸಿದ್ದರಾಮಯ್ಯ, ಮುಖ್ಯಮಂತ್ರಿ
ವರದಿ: ಶಿವಕುಮಾರ್ ಬೆಳ್ಳಿತಟ್ಟೆ, ಕನ್ನಡಪ್ರಭ
ಬೆಂಗಳೂರು: ಜಯಲಲಿತಾ ಅಧಿನಾಯಕಿಯಾಗಿದ್ದ ಎಐಎಡಿಎಂಕೆ ಪಕ್ಷ ಕರ್ನಾಟಕದಲ್ಲಿ ಏನಾಗಿತ್ತು? ಮುಂದೇನು ಎಂಬಿತ್ಯಾದಿ ಪ್ರಶ್ನೆಗಳು ಈಗ ಉದ್ಭವಿಸಿವೆ. ಏಕೆಂದರೆ, ಕರ್ನಾಟಕದಲ್ಲಿ ಎಐಎಡಿಎಂಕೆ ಪಕ್ಷವನ್ನು ಪ್ರಬಲವಾಗಿ ಬೆಳೆಸಿ, ಅಧಿಕಾರ ಹಿಡಿವ ಚಿಂತನೆಯೂ ಇತ್ತು. ಅಷ್ಟೇ ಏಕೆ ? ದೇಶವ್ಯಾಪಿ ವಿಸ್ತರಿಸಿ ತೃತೀಯ ಶಕ್ತಿಯಾಗಿ ಹೊರ ಹೊಮ್ಮಿಸುವ ಮಹತ್ವಾಕಾಂಕ್ಷೆ ಜಯಲಲಿತಾ ಅವರದಾಗಿತ್ತು. ಈ ನಿಟ್ಟಿನಲ್ಲಿ ಅವರು 4 ದಶಕಗಳ ಹಿಂದೆಯೇ ಪ್ರಯತ್ನ ಮಾಡಿ ಆರಂಭಿಕ ಯಶಸ್ಸನ್ನೂ ಸಾಧಿಸಿದ್ದರು. ತಮಿಳುನಾಡು ಎಂದರೆ ಮೂಗು ಮುರಿಯುವ ಕನ್ನಡಿಗರ ಮನಗೆಲ್ಲುವಂತೆ ಮಾಡಿ 1987ರಲ್ಲೇ ಕರ್ನಾಟಕದ ರಾಜಧಾನಿ ಬಿಬಿಎಂಪಿ ಆಡಳಿತದ ಚುಕ್ಕಾಣಿಯನ್ನು ಭಾಗಶಃ ಹಿಡಿದಿದ್ದರು. ಅಷ್ಟೇ ಅಲ್ಲ. ಒಬ್ಬ ಶಾಸಕರೂ ಪಕ್ಷದಿಂದ ಆರಿಸಿ ರಾಜ್ಯ ವಿಧಾನಸಭೆಗೆ ಹೋಗುವಂತೆ ಮಾಡಿದ್ದರು. ಇದಕ್ಕಾಗಿ ಜಯಲಲಿತಾ ಸದ್ದಿಲ್ಲದೆ ತಳಮಟ್ಟದಲ್ಲಿ ಪಕ್ಷ ಸಂಘಟಿಸುತ್ತಾ ಇಡೀ ರಾಜ್ಯದಲ್ಲೇ ಪಕ್ಷವನ್ನು ಕಟ್ಟಿಬೆಳೆಸುವ ಕನಸೊತ್ತಿದ್ದರು. ಆದರೆ ಪಕ್ಷದೊಳಗಿನ ಬಣ ರಾಜಕೀಯ ಆಕೆ ಮಹತ್ವಾಕಾಂಕ್ಷೆಗೆ ತಣ್ಣೀರು ಸುರಿದಿತ್ತು. ಈಗ ಜಯ ಸಾವಿನ ಪರಿಣಾಮ ಪಕ್ಷವನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿಸ್ತರಿಸುವ ಆಕೆ ಕನಸೂ ಮಣ್ಣಾಗುವಂತಾಗಿದೆ.
ಉದ್ಯಾನನಗರಿ ಆಡಳಿತಕ್ಕೆ ಲಗ್ಗೆ: ಕರ್ನಾಟಕದಲ್ಲಿ ಎಐಎಡಿಎಂಕೆ ಬೆಳೆಸುವ ಪ್ರಯತ್ನ ಸದ್ದಿಲ್ಲದೆ ನಡೆದಿತ್ತು. ಮಾಜಿ ಸಿಎಂ ಎಂ.ಜಿ.ರಾಮ ಚಂದ್ರನ್ ತೀರಿಕೊಂಡ ನಂತರ ಪಕ್ಷದ ಚುಕ್ಕಾಣಿ ಹಿಡಿದ ಜಯಲಲಿತಾ ಪಕ್ಷವನ್ನು ದೇಶಾದ್ಯಂತ ವಿಸ್ತರಿಸುವ ಹಂಬಲ ಹೊಂದಿದ್ದರು. ಆ ಉತ್ಸಾಹದಲ್ಲೇ ಅವರು 1983ರಲ್ಲೇ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದರು. ಅಂದಿನ ಕಾಲಕ್ಕೆ ಬೆಂಗಳೂರು ಪಾಲಿಕೆಗೆ ಎಐಎಡಿಎಂಕೆಯಿಂದ ಸುಮಾರು 7 ಮಂದಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಬೆಂಗಳೂರಿನ ಸ್ವತಂತ್ರ್ಯಪಾಳ್ಯ, ಭಾಷ್ಯನಗರ, ರಾಮಚಂದ್ರಪುರ, ಅಗ್ರಹಾರ, ಪ್ರಕಾಶ್ ನಗರ ಮತ್ತು ಕಂಟೋನ್ಮಮೆಂಟ್ ಸೇರಿದಂತೆ ಅನೇಕ ಕಡೆ ಎಐಎಡಿಎಂಕೆ ಗೆದ್ದು ಪಾಲಿಕೆಯಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲ. ನಂತರದಲ್ಲಿ ಅಧಿಕಾರವನ್ನೂ ಭಾಗಶಃ ಹಿಡಿದಿತ್ತು.
ಅಂದರೆ 1990ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಎಐಎಡಿಎಂಕೆ ಕೇವಲ 3 ವಾರ್ಡ್'ಗಳಲ್ಲಿ ಮಾತ್ರ ಗೆದ್ದಿತ್ತು. ಅದೃಷ್ಟವೆಂದರೆ ಕಾಂಗ್ರೆಸ್ ಜತೆ ಕೈ ಜೋಡಿಸಿ ಅಧಿಕಾರವನ್ನೂ ಹಿಡಿಯಿತು. ಗಾಂಧಿನಗರ ಭಾಗದಿಂದ ಸ್ಪರ್ಧಿಸಿ ಗೆದ್ದಿದ್ದ ಅಂದಿನ ಸದಸ್ಯ ಬಿ.ಮುನಿಯಪ್ಪ, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿದ್ದರು. ನಾಲ್ಕು ವರ್ಷಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುನಿಯಪ್ಪ ಗಾಂಧಿನಗರದಿಂದ ಸ್ಪರ್ಧಿಸಿ ಕಾಂಗ್ರೆಸ್ನ ದಯಾನಂದ ರಾವ್ ವಿರುದ್ಧ ಗೆಲುವನ್ನೂ ಸಾಧಿಸಿದ್ದರು.
ಗೌಡರೊಂದಿಗೆ ಉತ್ತಮ ಬಾಂಧವ್ಯ: ಈ ಅವಧಿ ಮುಗಿಯುವಷ್ಟರಲ್ಲಿ ಎಐಎಡಿಎಂಕೆ ಪಕ್ಷದಲ್ಲೇ ಎರಡು ಬಣ ಕಾಣಿಸಿಕೊಂಡಿತ್ತು. ತಿರುವಣ್ಣವರ್ ಅರಸ್ ನೇತೃತ್ವದಲ್ಲಿ ಮುನಿಯಪ್ಪ ಸೇರಿಕೊಂಡರು. ನಂತರ ಪಕ್ಷವನ್ನೇ ತ್ಯಜಿಸಿದರು. ನಂತರ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಗಾಂಧಿನಗರದಿಂದ ಯುವರಾಜ್ ಎಂಬವರು ಸ್ಪರ್ಧಿಸಿದರು. ಆದರೆ ಫಲ ಸಿಗಲಿಲ್ಲ. ಇದರಿಂದ ಜಯಲಲಿತಾ ತೀರಾ ನಿರಾಶೆಗೀಡಾದರು. ಆನಂತರ ರಾಜ್ಯದಲ್ಲಿ ಪಕ್ಷ ಬೆಳೆಸಬೇಕೆನ್ನುವ ಅವರ ಯತ್ನ ಮುಂದುವರಿಸಿದರು. ಸ್ಥಳೀಯ ಪದಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ಸಂಘಟನೆಗೆ ಒತ್ತು ನೀಡುತ್ತಿದ್ದರು. ಆದರೆ ತಮಿಳುನಾಡಿನ ಒತ್ತಡದ ರಾಜಕೀಯ ಕರ್ನಾಟಕಕ್ಕೆ ಆದ್ಯತೆ ನೀಡುವುದಕ್ಕೆ ಬಿಡಲಿಲ್ಲ. ಆದರೂ ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಉತ್ತಮ ರಾಜಕೀಯ ಸಂಬಂಧ ಉಳಿಸಿಕೊಂಡು ತೃತೀಯ ಶಕ್ತಿ ರಚಿಸುವ ಆಸಕ್ತಿ ತೋರಿಸುತ್ತಿದ್ದರು. ಇದಕ್ಕಾಗಿ ಮಾಜಿ ದೇವೇಗೌಡರು ಅನೇಕ ಬಾರಿ ಚನ್ನೈನಲ್ಲಿರುವ ಜಯ ಅವರ ನಿವಾಸಕ್ಕೆ ತೆರಳಿ ಮಾತನಾಡಿರುವುದುಂಟು. ಆದರೂ ಅವರ ಪ್ರಯತ್ನ ಯಶ ನೀಡಲಿಲ್ಲ.
ರಾಜ್ಯಕ್ಕೆ ಬಂದು ಕಾವೇರಿ ಹೋರಾಟ:
1987ರಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿತ್ತು. ಎರಡೂ ರಾಜ್ಯಗಳಲ್ಲೂ ಗಲಾಟೆ ನಡೆಯುವ ಹಂತಕ್ಕೆ ಹೋಗಿತ್ತು. ಆದರೆ ಆಗ ಎಐಎಡಿಎಂಕೆ ಪಕ್ಷ ಸೋತಿತ್ತು. ಡಿಎಂಕೆ ಆಡಳಿತದ ಸರ್ಕಾರದಲ್ಲಿ ಜಯಲಲಿತಾ ಪ್ರತಿಪಕ್ಷ ನಾಯಕಿಯಾಗಿದ್ದರು. ಅಂದು ರಾಜ್ಯದ ಮುಖ್ಯಮಂತ್ರಿ ಜತೆ ನೇರವಾಗಿ ಕಾವೇರಿ ವಿಚಾರ ಚರ್ಚಿಸಲು ನಿಯೋಗದೊಂದಿಗೆ ರಾಜ್ಯಕ್ಕೆ ಬಂದಿದ್ದರು. ಅದರಲ್ಲೂ ಬೆಂಗಳೂರಿನ ಅಶೋಕ ಹೊಟೇಲ್ಗೆ ಬಂದು ಒಂದು ದಿನ ತಂಗಿದ್ದರು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಅವರೊಂದಿಗೆ ಸಭೆ ನಡೆಸಿ ನಂತರ ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ್ದರು.
ಹೃದಯಾಘಾತದಿಂದ ಅಭಿಮಾನಿ ಸಾವು
ತರೀಕೆರೆ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನ ವಾರ್ತೆ ಕೇಳಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ಪಟ್ಟಣದ ಕೋಡಿಕ್ಯಾಂಪ್ನ 2ನೇ ಕ್ರಾಸ್ನಲ್ಲಿ ಮಂಗಳವಾರ ನಡೆದಿದೆ. ಸ್ವಾಮಿ ಕಣ್ಣನ್(53) ಮೃತರು. ಕಣ್ಣನ್ ಅವರು ಜಯಾ ಮಾತ್ರವಲ್ಲ ದಿ. ಎಂ.ಜಿ. ರಾಮಚಂದ್ರನ್ ಅವರ ಕಟ್ಟಾಅಭಿಮಾನಿಯೂ ಆಗಿದ್ದರು.
(epaper.kannadaprabha.in)
