ಚೆನ್ನೈ (ಅ.05): ಮುಖ್ಯಮಂತ್ರಿ ಜಯಲಲಿತಾ ಅವರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ರಾಜಕೀಯ ಲೆಕ್ಕಚಾರ ಆರಂಭವಾಗಿದೆ. ಜಯಾ ಆಸ್ಪತ್ರೆಗೆ ಸೇರಿ 13 ದಿನಗಳು ಕಳೆದಿದೆ. ಇತ್ತ ಸಿಎಂ ಇಲ್ಲದೇ ಆಡಳಿತ ಯಂತ್ರ ಕುಸಿಯುತ್ತಿದೆ ಎಂಬ ಆರೋಪವನ್ನು ಎಐಎಡಿಎಂಕೆ ಪಕ್ಷ ಕಟ್ಟಿಕೊಳ್ಳುತ್ತಿದೆ. ಹೀಗಾಗಿ ಅಮ್ಮನ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ತುಂಬುವ ಮತ್ತೊಬ್ಬ ನಿಷ್ಠಾವಂತ ವ್ಯಕ್ತಿಯನ್ನು ಸಿಎಂ ಮಾಡುವುದು ಈಗ ತಮಿಳುನಾಡು ಸರ್ಕಾರಕ್ಕೆ ಅನಿವಾರ್ಯವಾಗಿದೆ. 

ಸಿಎಂ ಇಲ್ಲದೇ ರಾಜ್ಯ ಸರ್ಕಾರ ಅನೇಕ ಸಂಕಷ್ಟ ಎದುರಿಸಬೇಕಿದೆ.ರಾಜ್ಯದ ಆಡಳಿತ ಸುಸೂತ್ರವಾಗಿ ಮುನ್ನಡೆಸಲು ಹಾಗೂ ಜನರ ರಕ್ಷಣೆಗೆ ಸಿಎಂ ಸ್ಥಾನ ತುಂಬಬೇಕಾದುದು ಅತ್ಯಗತ್ಯವಾಗಿದೆ ಎಂದು ರಾಜಕೀಯ ಪಂಡಿತರ ಅಭಿಪ್ರಾಯ. ಕೇಂದ್ರ ಸರ್ಕಾರ. ನಿನ್ನೆ ಕರ್ನಾಟಕದ ಪರ ಅಫಿಡವಿಟ್ ಸಲ್ಲಿಸಿರುವುದು ತಮಿಳು ನಾಡಿಗೆ ಹಿನ್ನಡೆಯಾಗಿದೆ. ಹೀಗಾಗಿ ವಿಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಇದನ್ನೆಲ್ಲಾ ಬಹಳ ಸೂಕ್ಷ್ಮವಾಗಿ ದೂರದಿಂದಲೇ ಗಮನಿಸುತ್ತಿರುವ ಎಐಎಡಿಎಂಕೆ ಮುಖಂಡರು, ಜಯಲಲಿತಾ ಅವರ ಸ್ಥಾನಕ್ಕೆ ಪನ್ನೀರ್ ಸೆಲ್ವಂ ಅವರೇ ಸೂಕ್ತ ವ್ಯಕ್ತಿ ಎಂದಿದ್ದಾರೆ ಎನ್ನಲಾಗಿದೆ. ಇನ್ನು ಪನ್ನೀರ್ ಸೆಲ್ವಂ ಅಮ್ಮನ ಅನುಪಸ್ಥಿತಿಯಲ್ಲಿ ಸಿಎಂ ಆಗಲು ತಯಾರಾಗುತ್ತಿದ್ದಾರೆ. ಈ ಬಾರಿ ಅವರೇನಾದ್ರೂ ಮುಖ್ಯಮಂತ್ರಿ ಮೂರನೇ ಬಾರಿಗೆ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ. ಸದ್ಯ ಪನ್ನೀರ್ ಸೆಲ್ವಂ ಜಯಾ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾರೆ.

ಇನ್ನೊಂದು ಕಡೆ ಡಿಎಂಡಿಕೆ ಪಕ್ಷ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಪಕ್ಷದ ಮುಖ್ಯಸ್ಥ ವಿಜಯಕಾಂತ್ ಅವರನ್ನು ಸಿಎಂ ಆಗಿ ನೇಮಿಸುವಂತೆ ಒತ್ತಾಯ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಕರುಣಾನಿಧಿ ಕೂಡ ಇದೇ ಲೆಕ್ಕಚಾರದಲ್ಲಿ ಮಾತನ್ನಾಡುತ್ತಿದ್ದಾರೆ.

ಒಟ್ಟಾರೆ ತಮಿಳುನಾಡಿನಲ್ಲಿ ಸಿಎಂ ಆಸ್ಪತ್ರೆ ಪಾಲಾಗಿರುವುದು ಎಐಎಡಿಎಂಕೆ ಕಾರ್ಯಕರ್ತರ ನಿದ್ರೆ ಕೆಡಿಸಿದೆ. ಆದ್ರೆ ಅಮ್ಮನ ಆರೋಗ್ಯ ಸುಧಾರಿಸುವವರೆಗೂ ಪನ್ನೀರ್ ಸೆಲ್ವಂ ರಾಜ್ಯದ ಸಿಎಂ ಆಗ್ತಾರೆ ಎಂಬ ಮಾತುಗಳು ಚೆನ್ನೈನಲ್ಲಿ ಹರಿದಾಡುತ್ತಿದ್ದು, ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.