ಅನಂತಕುಮಾರ್​ ಹೆಗಡೆ ಅನಿರೀಕ್ಷಿತವಾಗಿ ಕೇಂದ್ರ ಸಚಿವರಾಗಿರುವ ಆಘಾತದಲ್ಲಿರುವ ರಾಜ್ಯ ಬಿಜೆಪಿ ನಾಯಕರಿಗೆ ಇಂದಿನಿಂದ ಗಂಭೀರ ಚುನಾವಣಾ ತಯಾರಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಚುನಾವಣಾ ಉಸ್ತುವಾರಿ ಪ್ರಕಾಶ್​ ಜಾವಡೇಕರ್​ ಮತ್ತು ಸಹ-ಉಸ್ತುವಾರಿ ಪಿಯೂಷ್​ ಗೋಯೆಲ್​ ಇಂದಿನಿಂದ ತಮ್ಮ ಕಾರ್ಯಚಟುವಟಿಕೆ ಆರಂಭಿಸಲಿದ್ದಾರೆ. ಇಡೀ ದಿನ ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಿಗದಿಯಾಗಿದೆ.

ಬೆಂಗಳೂರು(ಸೆ.04): 2018ಕ್ಕೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಹೈಕಮಾಂಡ್​ ಹೊರಿಸಿರುವ ಜವಾಬ್ದಾರಿ ಹೊತ್ತು ಬೆಂಗಳೂರಿಗೆ ಬಂದಿಳಿದಿರುವ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್​ ಜಾವಡೇಕರ್​ ಇಂದಿನಿಂದ ತಮ್ಮ ಚಟುವಟಿಕೆ ಆರಂಭಿಸಲಿದ್ದಾರೆ. ಸಹ ಚುನಾವಣಾ ಉಸ್ತುವಾರಿಯಾಗಿರುವ ರೈಲ್ವೇ ಸಚಿವ ಪಿಯೂಷ್​ ಗೋಯೆಲ್​ ಕೂಡಾ ಜಾವಡೇಕರ್​ಗೆ ಜೊತೆ ನಿಲ್ಲಲಿದ್ದಾರೆ.

ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿರುವ ಜಾವಡೇಕರ್​ ಉಪಸ್ಥಿತಿಯಲ್ಲಿ ಬೆಳಗ್ಗೆ ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದ್ದು, ಮಧ್ಯಾಹ್ನದ ಬಳಿಕ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯೂ ನಿಗದಿಯಾಗಿದೆ. ಈ ಮಧ್ಯೆ ಪ್ರಕಾಶ್​ ಜಾವಡೇಕರ್​ ಉಪಸ್ಥಿತಿಯಲ್ಲೇ ರಾಜ್ಯ ಸರ್ಕಾರದ ಸಚಿವರೊಬ್ಬರ ವಿರುದ್ದದ 600 ಎಕರೆ ಭೂ ಹಗರಣದ ಆರೋಪದ ದಾಖಲಾತಿಗಳನ್ನು ಯಡಿಯೂರಪ್ಪ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಒಟ್ಟಾರೆ, ಮಿಷನ್ 150ಕ್ಕೆ ಪ್ರಕಾಶ್​ ಜಾವಡೇಕರ್​ ನೇತೃತ್ವದಲ್ಲಿ ಇಂದಿನಿಂದ ಕಮಲ ಪಕ್ಷದ ಗಂಭೀರ ತಯಾರಿ ಆರಂಭವಾಗಲಿದೆ. ಅಮಿತ್​ ಷಾ ನಿರ್ದೇಶನಗಳು ಇಂದಿನಿಂದ ಜಾವಡೇಕರ್​ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿವೆ.

ವರದಿ: ಕಿರಣ್​ ಹನಿಯಡ್ಕ, ಸುವರ್ಣ ನ್ಯೂಸ್​.