ಸದ್ಯ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಜಗಳ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಇದೀಗ ಮತ್ತೊಮ್ಮೆ ಈ ಕದನ ಹೊತ್ತಿ ಉರಿಯುವ ಸಾಧ್ಯತೆ ಇದೆ. 

ಬೆಂಗಳೂರು : ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ ತಾರಕಕ್ಕೇರಿದ್ದ ಜಾರಕಿಹೊಳಿ ಸಹೋದರರು ಹಾಗೂ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ನಡುವಿನ ಬೆಂಕಿಯು ತಾತ್ಕಾಲಿಕವಾಗಿ ಶಮನವಾಗಿದ್ದರೂ, ಅದು ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವೇಳೆ ಮತ್ತೆ ಭುಗಿಲೇಳುವ ಸೂಚನೆಯನ್ನು ಸತೀಶ್‌ ಜಾರಕಿಹೊಳಿ ಅವರೇ ಶನಿವಾರ ಕೊಟ್ಟಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ತಾವು ಹೇಳಿದವರಿಗೆ ಟಿಕೆಟ್‌ ದೊರೆಯಬೇಕು ಎಂದು ಉಭಯ ಬಣಗಳು ಪಟ್ಟು ಹಿಡಿಯುವ ಸೂಚನೆ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ತಾವು ಸೂಚಿಸಿದ ವ್ಯಕ್ತಿಗೆ ಟಿಕೆಟ್‌ ನೀಡದಿದ್ದರೆ ಅದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದಂತೆ ಎಂದು ಈಗಲೇ ಹೈಕಮಾಂಡ್‌ಗೆ ಅವರು ಸಂದೇಶ ಕೂಡ ರವಾನೆ ಮಾಡಿದ್ದಾರೆ.

ಒಂದು ಮೂಲದ ಪ್ರಕಾರ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸ್ವತಃ ತಾವೇ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ. ಈ ಮೂಲಕ ತಾವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು, ಗೆದ್ದರೆ ತಮ್ಮ ವಿಧಾನಸಭಾ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರಕ್ಕೆ ನಡೆಯುವ ಉಪ ಚುನಾವಣೆಗೆ ತಮ್ಮ ಸಹೋದರನನ್ನೇ ಕಣಕ್ಕಿಳಿಸುವುದು ಅವರ ಉದ್ದೇಶ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಜಾರಕಿಹೊಳಿ ಸಹೋದರರು ಕೂಡ ತಮ್ಮ ಮತ್ತೊಬ್ಬ ಸಹೋದರರನ್ನು ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದಾರೆ. ಮತ್ತೊಬ್ಬ ಸಹೋದರನಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ನಿರಾಕರಿಸಿದ ಪಕ್ಷದಲ್ಲಿ ತಾವು ಸೂಚಿಸಿದ ಬೇರೊಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿಯುವ ಉದ್ದೇಶ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಲೋಕಸಭೆ ಟಿಕೆಟ್‌ ಹಂಚಿಕೆ ವೇಳೆ ಮತ್ತೆ ತಿಕ್ಕಾಟ ಶುರುವಾಗಲಿದೆ. ಪಿಎಲ್‌ಡಿ ಬ್ಯಾಂಕ್‌ ಪಟ್ಟಕ್ಕಾಗಿಯೇ ಸರ್ಕಾರ ಪತನಗೊಳಿಸುವ ಹೇಳಿಕೆಗಳು ವಿನಿಮಯವಾಗಿದ್ದರಿಂದ ಲೋಕಸಭೆ ಟಿಕೆಟ್‌ ಹಂಚಿಕೆ ವೇಳೆ ಜಗಳವು ಮತ್ತಷ್ಟುಕಾವು ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಅವರು ತಮ್ಮ ಬಣದವರೇ ಅಧ್ಯಕ್ಷರಾಗಬೇಕು ಎಂದು ಹಾಗೂ ಸಚಿವ ರಮೇಶ್‌ ಜಾರಕಿಹೊಳಿ, ಶಾಸಕ ಸತೀಶ್‌ ಜಾರಕಿಹೊಳಿ ಅವರು ತಮ್ಮ ಬಣದವರು ಅಧ್ಯಕ್ಷರಾಗಬೇಕು ಎಂದು ಜಟಾಪಟಿಗೆ ಇಳಿದಿದ್ದರು. ಬಹಿರಂಗ ದೂಷಣೆಯಿಂದ ಹಿಡಿದು ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸುವವರೆಗೆ ಆರೋಪ-ಪ್ರತ್ಯಾರೋಪಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರು ಮಧ್ಯಸ್ಥಿಕೆ ವಹಿಸಿ ತಾತ್ಕಾಲಿಕವಾಗಿ ವಿವಾದ ಶಮನಗೊಳಿಸಿದ್ದಾರೆ.